ಭಾನುವಾರ, ಡಿಸೆಂಬರ್ 13, 2015

ಈಸ್ಟ್ ಇಂಡಿಯಾ ಪ್ರವಾಸ ಕಥನ

ದಿನಾಂಕ 30-04-2015 ರಂದು ಬೆಂಗಳೂರಿನ 'ಅಡಿಗಾಸ್ ಯಾತ್ರಾ' ಸಂಸ್ಥೆಯವರು ಪ್ರಾಯೋಜಿಸಿದ ಈಸ್ಟ್ ಇಂಡಿಯಾ ಯಾತ್ರೆಯಲ್ಲಿ 31 (+5 ಸಿಬ್ಬಂದಿಯವರು) ಜನರ ಗುಂಪಿನಲ್ಲಿ ನಾನೂ, ನನ್ನ ಪತ್ನಿ ವಿಜಯಲಕ್ಷ್ಮಿಯೂ ಯಾತ್ರಿಕರಾಗಿ ಬೆಂಗಳೂರಿನಿಂದ ಆಂಧ್ರಪ್ರದೇಶ ಮಾರ್ಗವಾಗಿ ಒರಿಸ್ಸಾ, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಸಂಚರಿಸಿದೆವು. 01-05-2015 ರ ರಾತ್ರೆ ಖುರ್ದಾರೋಕ್ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಬಸ್ಸಿನಲ್ಲಿ ಪುರಿ ತಲುಪಿ ಹೋಟೆಲಿನಲ್ಲಿ ತಂಗಿದೆವು.

02-05-2015 ರ ಬೆಳಗಿನ 05:30 ಕ್ಕೆ ಸರಿಯಾಗಿ ಬೆಳಕು ಹರಿದಿತ್ತು. ನಾವು ತಂಗಿದ್ದ ಹೋಟೆಲಿನ ಎದುರಿಗಿದ್ದ ಸಮುದ್ರ ತೀರಕ್ಕೆ ನಡೆದೆವು. ಅದಾಗಲೇ ಜನ ಮೀನುಗಾರಿಕೆಗೆ ಸೇರಿದ್ದರು. ಬೆಳಗಿನ ಹೊತ್ತು ಸಮುದ್ರದ ಗಾಳಿ ತಂಪಾಗಿತ್ತು. ಉಪಾಹಾರದ ನಂತರ 30 ಕಿ.ಮೀ. ಪ್ರಯಾಣಿಸಿ ಚಂದ್ರಭಾಗಾ ನದಿ ಸಂಗಮ ದಾಟಿ, ಸಮುದ್ರ ಕಿನಾರೆಗೆ ತೆರಳಿದೆವು. ಸಮುದ್ರ ಸ್ನಾನಕ್ಕಿಳಿದ ಮಕ್ಕಳ ದಂಡೇ ಅಲ್ಲಿತ್ತು. ಶಂಖ, ಚಿಪ್ಪು ಮಾರಾಟದ ಮಳಿಗೆಗಳಿದ್ದವು. ಒರಿಸ್ಸಾದ ರಸ ಬಾಳೆಹಣ್ಣುಗಳ ರಸದೌತಣ ಸವಿದು 3 ಕಿ.ಮೀ. ಅಂತರದಲ್ಲಿದ್ದ ಜಗತ್ಪ್ರಸಿದ್ಧ ಕೋನಾರ್ಕ್ ಸೂರ್ಯದೇವಾಲಯಕ್ಕೆ ತೆರಳಿದೆವು. ಗಂಗವಂಶದ ನರಸಿಂಹ ದೇವನಿಂದ 13 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಶಿಲ್ಪಕಲಾ ವೈಭವ ಅಮೋಘವೇ ಸರಿ. ಪುರಂದರ ಕೇಸರಿ ಎಂಬ ರಾಜ ಹಿಂದೆ ನಿರ್ಮಿಸಿದ ದೇವಾಲಯದಲ್ಲಿದ್ದ ಸೂರ್ಯದೇವನ ಮೂಲ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಯಿತಂತೆ. ಕಲ್ಲಿನಿಂದ ಕೆತ್ತಲಾದ 12 ಜೊತೆ ಚಕ್ರಗಳಿಂದ ಕೂಡಿದ 7 ಕುದುರೆಗಳಿಂದ ಎಳೆಯಲ್ಪಟ್ಟ ಸೂರ್ಯದೇವನ ಭವ್ಯ ರಥದ ಕಲ್ಪನೆಯಲ್ಲಿ ನಿರ್ಮಿಸಲಾದ ಒರಿಸ್ಸಾ ಶಿಲ್ಪಕಲಾ ಮಾದರಿ ಇದಾಗಿದೆ. ಸುಮಾರು 150 ಅಡಿಗಳೆತ್ತರದ ಗರ್ಭಗೃಹ, ಜಗಮೋಹನ, ವಿಶಾಲವಾದ ಭೋಗ ಮಂಟಪ, ಅಸಂಖ್ಯ ಪ್ರಾಣಿ, ಪಕ್ಷಿ ಮಿಥುನಶಿಲ್ಪಗಳಿಂದ ಆವೃತವಾಗಿದೆ. ಇಸ್ವಿ 1900 ರಲ್ಲಿ ಬಂಗಾಲದ ಗವರ್ನರ್ ಆಗಿದ್ದ ಜೋನ್ ವುಡ್ ಬರ್ನ್ ಶಿಥಿಲಾವಸ್ಥೆಗೆ ತಲುಪಿದ ಈ ಸ್ಮಾರಕವನ್ನು ಉಳಿಸಲು ಗರ್ಭಗೃಹದೊಳಕ್ಕೆ ಕಲ್ಲುಗಳನ್ನು ತುಂಬಿ ಭದ್ರಗೊಳಿಸಿ, ಸೂರ್ಯದೇವನ ಮೂಲ ವಿಗ್ರಹವನ್ನು ರಕ್ಷಿಸಿದ್ದು, ಇದೀಗ ದೆಹಲಿಯ ನ್ಯಾಷನಲ್ ಮ್ಯೂಸಿಯಂ ನಲ್ಲಿದೆ. ಕೋನಾರ್ಕದ ಅರುಣಸ್ಥಂಭ ಪುರಿ ಜಗನ್ನಾಥ ದೇವಾಲಯಕ್ಕೆ ಸ್ಥಳಾಂತರಗೊಂಡಿತ್ತು.

ನಮ್ಮ ಮುಂದಿನ ಪಯಣ ಧವಳಗಿರಿ. ಮೌರ್ಯ ವಂಶದ ಅಶೋಕ ಚಕ್ರವರ್ತಿ ಕಳಿಂಗಯುದ್ಧ ನಡೆಸಿ ಗೆದ್ದ. ಆದರೆ ಲಕ್ಷಾಂತರ ಜನರು ಸತ್ತು ಇಲ್ಲವೇ ಗಾಯಗೊಂಡು ಹತ್ತಿರದಲ್ಲಿ ಹರಿಯುವ ದಯಾನದಿಯ ನೀರೇ ರಕ್ತಸಿಕ್ತವಾಗಿ ಕೆಂಪಾದುದನ್ನು ಕಂಡು ಮನನೊಂದು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದು ಧವಳಗಿರಿಯಲ್ಲಿ. ಅಶೋಕನ ಶಿಲಾಶಾಸನವಿದೆ. ಬುದ್ಧನ ವಿಗ್ರಹವಿದೆ. ಸ್ತೂಪವು ಸುಂದರವೂ ಭವ್ಯವೂ ಆಗಿದೆ.

ನಮ್ಮ ಮುಂದಿನ ಪಯಣ ಭುವನೇಶ್ವರದ 11 ನೇ ಶತಮಾನದ ಲಿಂಗರಾಜ ದೇವಾಲಯ. ಇಲ್ಲಿನ ಗೋಪುರ 190 ಅಡಿಗಳಷ್ಟೆತ್ತರದ್ದು. ವಿಶಾಲ ಜಗಮೋಹನ, ಭೋಗಮಂಟಪ, ನಂದಿ ಹಾಗೂ ಅಸಂಖ್ಯ ಪರಿವಾರ ದೇವತೆಗಳ ಗುಡಿಗಳ ಸಮೂಹವಾಗಿದೆ. ಅಂದಿನ ಪಯಣದ ಮುಂದಿನ ಗುರಿ ಸಾಖಿ ಗೋಪಾಲಸ್ವಾಮಿ ದೇವಸ್ಥಾನ. ಅಮೃತಶಿಲಾ ವಿಗ್ರಹಗಳು, ಕೃಷ್ಣ ಗೋಪಿಕೆಯರ ರಾಸಕ್ರೀಡಾ ಪ್ರತಿಮೆಗಳು ಅಲ್ಲಿವೆ. ಪ್ರಶಾಂತ ಗ್ರಾಮವದು.

ನಮ್ಮ ಯಾತ್ರೆಯ 4 ನೇ ದಿನ ಜಗತ್ಪ್ರಸಿದ್ದ ಪುರಿ ಜಗನ್ನಾಥ ದೇವರ ದರ್ಶನವಾಯಿತು. ಭವ್ಯವಾದ ಗೋಪುರ ಶಿಖರ, ಭೋಗಮಂಟಪ ಇತ್ಯಾದಿಗಳಿವೆ. ವಿಶಾಲವಾದ ಪ್ರಕಾರವಿದೆ. ಪ್ರತಿದಿನ 56 ಬಗೆಯ ಮೃಷ್ಟಾನ್ನ ನೈವೇದ್ಯ ಭೋಜನವಾಗತಕ್ಕ ವಿಶಿಷ್ಟ ಸಂಪ್ರದಾಯವಿದೆ. ಮಣ್ಣಿನ ಪಾತ್ರೆಗಳಲ್ಲಿ 750 ಕ್ಕೂ ಮಿಕ್ಕಿದ ಒಲೆಗಳಲ್ಲಿ ನೈವೇದ್ಯ ತಯಾರಿಸಲ್ಪಟ್ಟು; ಮರುದಿನಕ್ಕೆ ಹೊಸ ಪಾತ್ರೆಗಳೇ ಬೇಕು ಎಂಬ ನಿಯಮವಿದೆ. ಸಂಪ್ರದಾಯವಿದೆ. ಖಾಯಂ ಆಗಿ ನೇಮಕಗೊಂಡ 6000 ನೌಕರ ವರ್ಗ, ದೇವಸ್ಥಾನವನ್ನೇ ಅವಲಂಬಿಸಿ ಬದುಕುವ 20000 ಜನರ ಸೇವೆ ಜಗನ್ನಾಥನಿಗೆ ನಿತ್ಯ ಲಭ್ಯ.

ನಮ್ಮ ಮುಂದಿನ ಪಯಣ ಸಮುದ್ರದ ಹಿನ್ನೀರಿನ ವಿಸ್ತಾರವಾದ 'ಚಿಲಿಕಾ' ಸರೋವರದೆಡೆಗೆ. ಅಲ್ಲಿ ದೋಣಿವಿಹಾರ ಪ್ರಥಮ ಆಕರ್ಷಣೆ. ಚಿತ್ರ ವಿಚಿತ್ರ ಆಕಾರದ ಮುತ್ತಿನ ಜೀವಿಗಳೂ ಕಾಣಲು ಲಭ್ಯ. ಮೀನುಗಾರಿಕೆ ಪರಿಸರದ ಜನರ ಕಾಯಕ. ನೂರಾರು ಗುಡ್ಡಗಾಡು ಜನಾಂಗ, ಜಾತಿಗಳಿಂದ ಕೂಡಿದ ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು. ಸಾಮಾಜಿಕವಾಗಿ ವಿಶಿಷ್ಟ ಸಂಪ್ರದಾಯಗಳಿಂದ, ಆಚರಣೆಗಳಿಂದ, ನೃತ್ಯ ನಾಟಕಗಳಲ್ಲಿ ಪ್ರೌಢಿಮೆಗಳಿಸಿದವರು. 'ಪಿಪ್ಲಿ'  ಗ್ರಾಮದ ಜನ ವಸ್ತ್ರ ಚಿತ್ರ ಕಸೂತಿ ಕಲೆ, ರಘುರಾಜಪುರದ ಓಲೆಗರಿಯಲ್ಲಿ (ತಾಳೆಗರಿ) ರಚಿಸುವ 'ಚಿತ್ರಪಟ' ಇತ್ಯಾದಿ ಸುಂದರ ಕಲೆಗಳ ಸಂಪನ್ನರು. ಅಂತಹ ಹಸುರಿನ ತಾಣದಿಂದ ರಾತ್ರೆ ನಮ್ಮ ಪಯಣ, ಮಹಾನದಿ ದಾಟಿ ಕೋಲ್ಕತ್ತಾದತ್ತ ಮುಂದುವರಿಯಿತು.

5 ನೇ ದಿನದ ಸೂರ್ಯೋದಯಕ್ಕೆ ಪಶ್ಚಿಮ ಬಂಗಾಳದಲ್ಲಿದ್ದೆವು. ಕೋಲ್ಕತ್ತಾ ಬ್ರಿಟಿಷ್ ವಸಾಹತುಶಾಹಿಗಳಿಂದ 3 ಶತಮಾನಗಳಷ್ಟು ಹಿಂದೆ ನಿರ್ಮಿಸಲ್ಪಟ್ಟ ನಗರ. ಇಂದು ಅತ್ಯಂತ ಜನ ನಿಬಿಡವೂ, ಭವ್ಯವೂ, ದಿವ್ಯವೂ, ಕಲುಷಿತವೂ ಆದ ನಗರ. ಬೆಳಗಿನ 8 ಗಂಟೆಗೆ ಹೌರಾ ರೈಲ್ವೆ ಸ್ಟೇಷನ್ ತಲುಪಿ ಹೂಗ್ಲೀ ನದಿಯ ಮೇಲೆ ನಿರ್ಮಿಸಿದ 705 ಮೀ. ಉದ್ದದ, ತಳದಿಂದ ಆಧಾರವಿಲ್ಲದ ಪ್ರಸಿದ್ಧವಾದ ಉಕ್ಕಿನ ಹೌರಾ ಸೇತುವೆ, 'ರಬೀಂದ್ರ ಸೇತು' ವನ್ನು ದಾಟಿ, ನಮ್ಮ ಹೋಟೆಲ್ ತಲುಪಿದೆವು. ಮುಂದೆ ನಾವು ಕೋಲ್ಕತ್ತಾ ನಗರದ ಪ್ರಾಣಿ ಸಂಗ್ರಹಾಲಯ/ ತೋಟಗಾರಿಕಾ ವನವನ್ನು ನೋಡಿದೆವು. ಕೆಲವು ಪ್ರಾಣಿ, ಪಕ್ಷಿಗಳು ವಿಶಿಷ್ಟ ಜಾತಿಯವು. ಅಲ್ಲಿಂದ 'ಸಯನ್ಸ್ ಸಿಟಿ' ತಲುಪಿದೆವು. ಪ್ರತಿಯೊಂದರ ವೀಕ್ಷಣೆಗೂ ಬೇರೆ ಬೇರೆ ಶುಲ್ಕ ತೆತ್ತು 'ಜುರಾಸಿಕ್ ಫೋರೆಸ್ಟ್' ಮಿರರ್, ಲೆನ್ಸ್ ವೈವಿದ್ಯಗಳು, 3D ಶೋ, ತಾರಾಲಯ ವೀಕ್ಷಣೆ ಇತ್ಯಾದಿಗಳನ್ನು ನೋಡಿದೆವು.

6 ನೇ ದಿನ ನಮ್ಮ ಯಾತ್ರೆ ಶ್ರೀ ರಾಮಕೃಷ್ಣ ಪರಮಹಂಸರು ನೆಲೆಸಿದ್ದ ದಕ್ಷಿಣೇಶ್ವರ ಕಾಳೀ ದೇಗುಲ ಸಮುಚ್ಚಯ. ದ್ವಾದಶ ಜ್ಯೋತಿರ್ಲಿಂಗಗಳ ಮಾದರಿ ಇದೆ. ಹೂಗ್ಲೀ (ಗಂಗಾ) ಸ್ನಾನಘಟ್ಟ ನೋಡಿದೆವು. ರಾಮಕೃಷ್ಣ ಪರಮಹಂಸರು ಧ್ಯಾನಸ್ಥರಾಗುತ್ತಿದ್ದ ವಿವಿಧ ಛಾಯಾಚಿತ್ರಗಳಿದ್ದ ಮಂಟಪವನ್ನು ನೋಡಿ, ನದಿಯ ಇನ್ನೊಂದು ತಟದಲ್ಲಿದ್ದ ಬೇಲೂರು ಮಠದತ್ತ ಸೇತುವೆ ದಾಟಿ ಮುಂದುವರಿದೆವು. ಬೇಲೂರು ಮಠ ರಾಮಕೃಷ್ಣ ಮಿಶನ್ ನ ಪ್ರಧಾನ ಕಚೇರಿ. ವಿಶಾಲವಾದ ತೋಪಿನಲ್ಲಿ ವಿವಿಧ ಸ್ಮಾರಕಗಳನ್ನೊಳಗೊಂಡಿದೆ. ರಾಮಕೃಷ್ಣರ, ವಿವೇಕಾನಂದರ ವಿವಿಧ ಛಾಯಾಚಿತ್ರಗಳ ಸಂಗ್ರಹವಿರುವ ಮ್ಯೂಸಿಯಂ ಇದೆ. ಸಾಹಿತ್ಯ ಮಳಿಗೆ ಇದೆ. ಸ್ನಾನಘಟ್ಟವಿದೆ. ಅಲ್ಲಿಂದ ಹೌರಾ ಮಾರ್ಗವಾಗಿ ಮುಂದೆ ಕೇಬಲ್ ಗಳನ್ನು ಅಳವಡಿಸಿ ನಿರ್ಮಿಸಿದ ತೂಗು ಸೇತುವೆ - ವಿದ್ಯಾಸಾಗರ್ ಸೇತುವನ್ನು ದಾಟಿದೇವು. ಅಲ್ಲಿಂದ ಮುಂದೆ ಸಾಗಿ ಪ್ರಸಿದ್ಧ 'ಶಕ್ತಿಪೀಠ'ವೆನಿಸಿದ ಕಾಳೀಘಾಟ್ ಕಾಳೀ ಮಂದಿರ ಸಂದರ್ಶಿಸಿ ದೇವಿಯ ದರ್ಶನ ಪಡೆದೆವು. ಇಲ್ಲಿ ದೇವಿಯಿಂದಲೂ ಭಯಂಕರವಾಗಿ ವರ್ತಿಸುವ ಪುಂಡರಿದ್ದಾರೆ (ಅರ್ಚಕಗಣ). ವಿಶಾಲವಾದ ಕೋಲ್ಕತ್ತಾದ ಬೀದಿಗಳಲ್ಲಿ ಸಂಚರಿಸಿದೆವು. ಪಾಶ್ಚಾತ್ಯರಿಗೆ ಯೋಗದ ಮಹತ್ವ ತಿಳಿಸಿದ ಗುರುದೇವ ರಬೀಂದ್ರನಾಥ ಟಾಗೋರರ ಕರ್ಮಭೂಮಿ ಕೋಲ್ಕತ್ತಾ. ವಿಕ್ಟೋರಿಯ ಮೆಮೋರಿಯಲ್ ಭವ್ಯವಾದ ಬ್ರಿಟಿಷ್ ಸ್ಮಾರಕವಾಗಿದೆ. ಅದರೊಳಗೆ ವಿವಿಧ ಕಲಾವಿದರಿಂದ ಚಿತ್ರಿಸಲಾದ ಪೈಂಟಿಂಗ್ ಗಳು, ಘಟನಾ ಚಿತ್ರಗಳು ಆಕರ್ಷಕವಾಗಿವೆ. ವಿಸ್ತಾರವಾದ ಹುಲ್ಲುಹಾಸು, ಕೊಳ ಇದೆ. ಕೋಲ್ಕತ್ತಾದಲ್ಲಿ ಬಹಳ ಪ್ರಖ್ಯಾತವಾದ ಇಂಡಿಯನ್ ಮ್ಯೂಸಿಯಂ (ರಜೆ ಇದ್ದುದರಿಂದ), ಬೊಟೇನಿಕಲ್ ಗಾರ್ಡನ್ ಸುತ್ತುವ ಅವಕಾಶ ಸಿಗಲಿಲ್ಲ್. ಕೋಲ್ಕತ್ತಾದಲ್ಲಿ ರಸ್ತೆಗಳ ಜೊತೆಯಲ್ಲೇ ವಿದ್ಯುಚ್ಚಾಲಿತ ಟ್ರಾಮ್ ಗಾಡಿಗಳು ಸಂಚರಿಸುತ್ತವೆ. ಹಾಗೇ ನೆಲದ ಮೇಲೆ ಹಾಗೂ ಸುರಂಗದೊಳಗೆ ಸಂಚರಿಸುವ ಮೆಟ್ರೋ ರೈಲು ಇದೆ. ಜೊತೆಜೊತೆಗೆ ತಳ್ಳುಗಾಡಿಗಳು, ಸೈಕಲ್ ರಿಕ್ಷಾಗಳು ಬಡ ಕಾರ್ಮಿಕ, ಶ್ರಮ ಜೀವಿಗಳ ಜೀವನಾಧಾರಗಳಾಗಿವೆ. ಬಂಗಾಳೀ, ನೇಪಾಳೀ, ಅಸ್ಸಾಂ, ಬಾಂಗ್ಲಾ ಮೂಲದ ಹಲವು ಜನಾಂಗಗಳ ಜನರನ್ನೂ ಇಲ್ಲೇ ನೋಡಬಹುದು, ಕೇಳಬಹುದು.

ಮರುದಿನ ನಮ್ಮ ಯಾತ್ರೆ ಕೋಲ್ಕತ್ತಾದ 'ಸೀಲ್ ಡಾ' ರೈಲು ನಿಲ್ದಾಣದಿಂದ ಬೆಳಗಿನ 6 ಗಂಟೆಗೆ ಪ್ರಾರಂಭವಾಯಿತು. ದಾರಿಯ ಎರಡೂ ಬದಿಗಳಲ್ಲೂ ಹಚ್ಚಹಸುರಿನ ವಿಶಾಲವಾದ ಗಂಗಾ ಬಯಲು, ಫಲವತ್ತಾದ ಕೃಷಿ ಭೂಮಿ ಕಣ್ಣೆತ್ತುವಷ್ಟು ದೂರಕ್ಕೂ ವ್ಯಾಪಿಸಿದೆ. ಗಂಗಾನದಿಗೆ ನಿರ್ಮಿಸಿದ 'ಫರಕ್ಕಾ ಬ್ಯಾರೇಜು' ಬಹಳ ಉದ್ದವಾಗಿದೆ, ನೀರಿನ ವಿಸ್ತಾರ ಬಹಳವಿದೆ. ಇಲ್ಲಿಂದಲೇ ಗಂಗಾನದಿಯ ಕವಲೊಂದು ಹೂಗ್ಲೀ ನದಿ ಸೇರುವುದು. ಅಲ್ಲಿಂದ 'ಕಿಶನ್ ಗಂಜ್' (ಬಿಹಾರ) ಮೂಲಕ 'ನ್ಯೂ ಜಲ್ ಪ್ವಾ ಗುರಿ' ವರೆಗೂ ಹಣ್ಣಿನ ತೋಪುಗಳು, ವಿವಿಧ ಕೃಷಿ ಭೂಮಿ ಇದೆ. ಸಂಜೆ ಅಲ್ಲಿಂದ ಸಿಲಿಗುರಿಗೆ ವಾಹನದಲ್ಲಿ ತೆರಳಿದೆವು. ಸಿಲಿಗುರಿ ಸಾಮಾನ್ಯವಾದ ನಗರ.

ಮರುದಿನ ಸಿಲಿಗುರಿಯಿಂದ ವಿಶಾಲವಾದ ಸಾಗುವಾನಿ ತೋಟಗಳ ಎಡೆಯಲ್ಲಿ, ಸೈನಿಕ ಶಿಬಿರಗಳ ಮಧ್ಯೆ ಸಾಗಿ ಬರಡಾದ ನದಿಯೊಂದನ್ನು ದಾಟಿ, ಕಡಿದಾದ ಬೆಟ್ಟ ಗುಡ್ಡಗಳನ್ನು ಬಳಸಿ ಏರಿಸಾಗಿದಾಗ ತಂಪು ಹವೆ, ಚಹಾ ತೋಟಗಳ ರಮ್ಯ ದರ್ಶನವಾಯಿತು. ಸಾವಿರಾರು ಎಕರೆ ಚಹಾ ತೋಟಗಳು ನೋಡಲು ಬಹಳ ಸುಂದರವಾಗಿವೆ. ಮಧ್ಯಾಹ್ನದ ವೇಳೆಗೆ 'ಮಿರಿಕ್' ಸರೋವರವನ್ನು ತಲುಪಿದೆವು. ಇದು ವಿಹಾರ ತಾಣ. ದೋಣಿವಿಹಾರ, ಕುದುರೆ ಸವಾರಿಗೆ ಅವಕಾಶವಿದೆ. ಮುಂದಿನ ನಮ್ಮ ಪಯಣ ಫಿರ್, ಪೈನ್, ಬರ್ಟ್ ಮರಗಳ ಅಂದುವೆ ಸಾಗಿತು. ಅಲ್ಲಲ್ಲಿ ಹಲವು ಜಾತಿಯ ಬಿದಿರು ಇದ್ದವು. ನೇಪಾಳದ ಗಡಿಯ 'ಪಶುಪತಿನಾಥ'ವೆಂಬ ಚಿಕ್ಕ ವ್ಯಾಪಾರಿ ಕೇಂದ್ರವನ್ನು ಸುತ್ತಿ ರಾತ್ರೆ ವೇಳೆಗೆ 7500 ಅಡಿಗಳೆತ್ತರದ 'ಚಾ ತೋಟಗಳ ರಾಣಿ' ಎನಿಸಿದ ಡಾರ್ಜಿಲಿಂಗ್ ತಲುಪಿದೆವು. ಈ ಪರ್ವತ ನಗರ ಅಂಕುಡೊಂಕು ರಸ್ತೆಗಳು, ಜನನಿಬಿಡ ವ್ಯಾಪಾರ ಕೇಂದ್ರಗಳು, ವಾಸಸ್ಥಳಗಳನ್ನೂ ಹೊಂದಿದೆ. ಪ್ರಧಾನ ರಸ್ತೆಯ ಜೊತೆಗೇ ಸಿಲಿಗುರಿಯಿಂದ ಡಾರ್ಜಿಲಿಂಗ್ ನ 'ಘೂಂ' ಎಂಬಲ್ಲಿಯ ತನಕ ಅಗಲಕಿರಿದಾದ (Toy Train) ಟಾಯ್ ಟ್ರೈನ್ ಹಳಿ ಇದೆ. ಇಲ್ಲೆಲ್ಲಾ ಜೀಪು, ಟಾಟಾ ಸುಮೋ ದಂತಹ ವಾಹನಗಳೇ ಮುಖ್ಯ ವಾಹಿನಿಗಳು. ಚಳಿ ಚಳಿಯಾದ ಹವೆ. ಹಿಂದೂ ಸಮುದಾಯದವರ ಜೊತೆ ನೇಪಾಳಿ, ಸಿಕ್ಕಿಂ, ಅಸ್ಸಾಂ ಜನಾಂಗಗಳ ಜನರೂ ಬೆರೆತಿದ್ದಾರೆ. ನೇಪಾಳೀ, ಸಿಕ್ಕಿಂ, ಹಿಂದಿ ಭಾಷೆಗಳು ಪ್ರಧಾನ ಭಾಷೆಗಳು.

ಯಾತ್ರೆಯ 9 ನೇ ದಿನ ಬೆಳಗಿನ ಜಾವ 4 ಗಂಟೆಗೆ ನಾವು ಜೀಪಿನಲ್ಲಿ 'ಟೈಗರ್ ಹಿಲ್' ಗೆ ಪ್ರಯಾಣಿಸಿದೆವು. ಬೆಳಗಿನ 5 ರಿಂದ 5:15 ರೊಳಗೆ ಸೂರ್ಯೋದಯವಾಗುವುದು ಇಲ್ಲಿನ ವಾಡಿಕೆ. ಕಾಂಚನಜುಂಗಾ ಪರ್ವತ ಶಿಖರದಲ್ಲಿ ಸೂರ್ಯೋದಯದ ಮೊದಲ ಹೊಂಗಿರಣ ಕಾಣಿಸಿದಾಗ ಬೆಳಕಿನ ಹಲವು ಚಿತ್ತಾರಗಳನ್ನು, ಬೆಳ್ಳಿ, ಬಂಗಾರದ ಬಣ್ಣದಲ್ಲಿ ಹೊಳೆಯುವ ಪರ್ವತ ಶಿಖರದ ವೀಕ್ಷಣೆಗಾಗಿ ಜನ ಬಂದು ಕಾದಿರುತ್ತಾರೆ. ಹಿಂದಿನ ದಿನ ಮಳೆಯಾದುದರಿಂದ ನಾವು ಹೋದ ದಿನ ಮಂಜಿನ ಬಿಳಿ ಹೊದಿಕೆ ಮಾತ್ರ ಕಾಣಿಸಿ ಬೆಳಕಾಯಿತು. ಸೂರ್ಯ ಬರಲಿಲ್ಲ. ಆದರೆ ಖರೀದಿಸಿದ (DVD) ಡಿ.ವಿ.ಡಿ ಹಾಕಿ, ವಿರಾಮದ ವೇಳೆ ಕಾಂಚನಜುಂಗಾದ ಮೇಲಿನ ಸೂರ್ಯೋದಯ ಕಂಡು ತೃಪ್ತಿಪಟ್ಟೆವು. ಅಲ್ಲಿಂದ ಹಿಂದಿರುಗಿ 'ಘೂಂ' ಮೊನೆಸ್ಟರಿ (ಬೌದ್ಧ ಮಂದಿರ) ನೋಡಿದೆವು. ಗುಡ್ಡದ ಮೇಲಿನ 'ಬಟೇಸಿಯಾ ಲೂಪ್ ವಾರ್ ಮೆಮೋರಿಯಲ್' ವೀಕ್ಷಿಸಿದೆವು. ನಗರದ ಇನ್ನೊಂದು ಭಾಗದಲ್ಲಿ 5 ಕಿ.ಮೀ. ಉದ್ದದ ರೋಪ್ ವೇ ಯಲ್ಲಿ ಚಲಿಸಿ ಹೊಳೆಯುವ ಕಾಂಚನಜುಂಗಾ ಬೆಟ್ಟಗಳ ಸಾಲು, ಚಹಾ ತೋಟಗಳ ರಮ್ಯ ನೋಟ ನೋಡಿದೆವು. ಡಾರ್ಜಿಲಿಂಗ್ ನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. 'ತೇನ್ ಸಿಂಗ್ ರಾಕ್' ಹಿಮಾಲಯನ್ ಮೌಂಟನಿಯರಿಂಗ್ ಇನ್ಸ್ ಸ್ಟಿ ಟ್ಯೂಟ್, 'ಪದ್ಮಜಾ ನಾಯ್ಡು' ಜುವಾಲೋಜಿಕಲ್ ಪಾರ್ಕ್ ಇತ್ಯಾದಿಗಳನ್ನು ಕಂಡೆವು. ತೇನ್ ಸಿಂಗ್ 1953 ರಲ್ಲಿ ಎವರೆಸ್ಟ್ ಶಿಖರ ಏರಿದ ಕುರುಹಾಗಿ ಅವರು ಬಳಸಿದ ವಸ್ತುಗಳ ಸಂಗ್ರಹ, ಪರ್ವತಾರೋಹಿಗಳು, ಅವರ ವಿವಿಧ ಸಾಧನೆಗಳ ಸವಿಸ್ತಾರ ಚಿತ್ರವಿದೆ. ಪುರುಷ ಹಾಗೂ ಮಹಿಳಾ ಪರ್ವತಾರೋಹಿಗಳಿಗೆ ಮಾರ್ಗದರ್ಶನ, ಸಹಕಾರ ನೀಡುತ್ತಿರುವ ಉತ್ತಮ ಸಂಸ್ಥೆ ಇದಾಗಿದೆ. ಚಹಾ, ಉಣ್ಣೆಯ ಉಡುಪುಗಳಿಗೆ ಡಾರ್ಜಿಲಿಂಗ್ ಪ್ರಸಿದ್ಧವಾಗಿದೆ. ಪ್ರವಾಸೋದ್ಯಮ ಇನ್ನೊಂದು ಉದ್ದಿಮೆ.

ಯಾತ್ರೆಯ 10 ನೇ ದಿನ ನಾವು ಡಾರ್ಜಿಲಿಂಗ್ ನಿಂದ ತೀಸ್ತಾ ನದಿ ವರೇಗಿನ ಹಾದಿಯಲ್ಲಿ ಇಳಿಯುತ್ತಾ ಸಾಗಿದೆವು. ಕವಿ ರಬೀಂದ್ರನಾಥ ಟಾಗೋರರು ಬೇಸಿಗೆಯಲ್ಲಿ ಉಳಿಯುತ್ತಿದ್ದ ಬಂಗಲೆ, ಅವರ ಕೆಲವು ಚಿತ್ರಕಲಾ ಸಂಗ್ರಹಗಳು ನೋಡಲು ಲಭ್ಯವಾದವು. ತೀಸ್ತಾ ನದಿಯಲ್ಲಿ ರಬ್ಬರ್ ಬೋಟುಗಳಲ್ಲಿ ರಾಪ್ಟಿಂಗ್ ಕ್ರೀಡೆಗಳು ಕಾಣಸಿಕ್ಕಿದವು. ತೀಸ್ತಾ ನದೀ ತಟದಲ್ಲೇ ಏರುತ್ತಾ ಸಾಗಿದರೆ ಸಿಕ್ಕಿಂ ರಾಜಧಾನಿ ಗ್ಯಾಂಗ್ ಟೋಕ್ ಗೆ ಡಾರ್ಜಿಲಿಂಗ್/ ಸಿಲಿಗುರಿ ಗಳಿಂದ ೬ ಗಂಟೆಗಳ ದಾರಿ ಪ್ರಯಾಣ. 5500 ಅಡಿಗಳೆತ್ತರದ ಸುಂದರ, ಸ್ವಚ್ಛ ಪರ್ವತ ತಾಣ ಗ್ಯಾಂಗ್ ಟೋಕ್.

11 ನೇ ದಿನ ನಮ್ಮ ಬೆಳಗಿನ ಪಯಣ- ತ್ಸಾಂಗು ಲೇಕ್ (Tsomgo Lake) 12400 ಅಡಿಗಳ ಎತ್ತರದಲ್ಲಿದೆ. ಸ್ವಚ್ಛ ಗಾಳಿ, ಬಿಸಿಲು ಆಹ್ಲಾದಕರವಾಗಿತ್ತು. ಬೆಳಗಿನ 10 ಗಂಟೆ ಸಮಯದಲ್ಲಿ ಸರೋವರ ಸ್ಫಟಿಕದಂತೆ ಹೊಳೆಯುತ್ತಿತ್ತು. ಅಲ್ಲಿ ಚಮರೀ ಮೃಗಗಳನ್ನು ಸವಾರಿ ಮಾಡಿಸುವ ಹವ್ಯಾಸಿಗಳಿದ್ದರು. ಚಳಿ ತಡೆದುಕೊಳ್ಳಲು ಅವಶ್ಯವಾದ ಮೊಣಕಾಲು ತನಕ ಮುಚ್ಚುವ ಬೂಟುಗಳು ಹಾಗೂ ಕೈ ಚೀಲಗಳು ಬಾಡಿಗೆಗೆ ಅಲ್ಲಿ ಲಭ್ಯವಿದೆ. ಮುಂದುವರಿದ ನಮ್ಮ 'ಬೋಲೆರೋ' ವಾಹನಕ್ಕೆ ಹಿಮಗಡ್ಡೆಗಳು, ಬಿಳಿ ಹೂವಿನಂತೆ ಕಾಣುವ ಹಿಮದ ಹೊದಿಕೆ ಇಕ್ಕೆಲಗಳಲ್ಲೂ ಕಾಣಿಸಿತು. ಅಲ್ಲಲ್ಲಿ ಚಿಕ್ಕ ಸರೋವರಗಳೂ ಗೋಚರಿಸಿದವು. (Kup-Up) ಕುಪ್-ಅಪ್ ಎಂಬ ಗ್ರಾಮ ಕಾಣಸಿಕ್ಕಿತು. ಅಲ್ಲಲ್ಲಿ 'ಚೈನೀಸ್ ಒಬ್ಸರ್ವೇಶನ್ ಸ್ಪಾಟ್ಸ್' ಎಂಬ ಫಲಕಗಳು ಕಾಣಸಿಕ್ಕಿದವು. 14150 ಅಡಿ ಎತ್ತರದಲ್ಲಿರುವ ಪುರಾತನ ಚೀನಾ - ಭಾರತ ಸಿಲ್ಕ್ ರೂಟ್ ನಲ್ಲಿರುವ 'ನಥುಲಾ' ತಲುಪಿದೆವು. ಭಾರತೀಯ ಸೈನ್ಯದ ಪಂಜಾಬ್ 23 ನೇ ರೆಜಿಮೆಂಟಿನ ಭಾಭಾ ಹರಭಜನ್ ಸಿಂಗ್ ಎಂಬ ಸಿಪಾಯಿ 1968, ಒಕ್ಟೋಬರ್ 4 ರಂದು ಆಕಸ್ಮಿಕವಾಗಿ ಜಾರಿಬಿದ್ದು ತೀರಿಕೊಂಡಾತನ ಸ್ಮಾರಕ ಇಲ್ಲಿದೆ. ಆತನ ಆತ್ಮ ಇಂದಿಗೂ ಜೀವಂತವಾಗಿದ್ದುಭಾರತೀಯ ಸೈನಿಕರಿಗೆ ಸಹಾಯ ಮಾಡುತ್ತಿದೆ, ಅವಶ್ಯವಿದ್ದಾಗ ಸೂಕ್ಷ್ಮ ಮಾಹಿತಿ ಲಭ್ಯವಾಗುತ್ತಿದೆ, ಎಂಬ ಸೈನಿಕರ ನಂಬಿಕೆಯಿಂದ ಹಿಮದ ಹೊದಿಕೆಯ ಮೇಲೆ ಕೊರೆವ ಚಳಿಯಲ್ಲಿ ನಿರ್ಮಿಸಿದ ಸ್ಮಾರಕವಿದು. ಸೈನಿಕನ ಶರೀರ ಸಿಕ್ಕಲ್ಲಿ ಮೂಲ ಸಮಾಧಿ ಇದೆ. ಅಲ್ಲೂ ಸೈನಿಕರೇ ಕಾವಲಿದ್ದು ಪ್ರಯಾಣಿಕರಿಗೆ ಚಹಾ ನೀಡಿ ಸತ್ಕರಿಸುತ್ತಿದ್ದಾರೆ. ನಮ್ಮ ದೇಶದ ಸರಹದ್ದನ್ನು ನಮ್ಮ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ಪಣವಾಗಿಟ್ಟು ಬದುಕುತ್ತಿರುವ ಧೀರ ಯೋಧರಿಗೆ ಇದೋ ನಮನ!

ನಮ್ಮ ಮುಂದಿನ ಪಯಣಕ್ಕೆ ಮಧ್ಯಾಹ್ನ ಕವಿದ ಮೋಡ, ಜಿನುಗು ಮಳೆ, ಆಲಿಕಲ್ಲಿನಂತಹ ಹಿಮಪಾತ ತಡೆಯಾಯಿತು. ಹಿಮದ ಹೊದಿಕೆ ಹೊರಗಿನ ದೃಶ್ಯವನ್ನು ಮರೆಮಾಚಿತು. ನಾವು ಹಿಂದಿರುಗಿ ತ್ಸಾಂಗು ಲೇಕ್ ತಲುಪಿದಾಗ ಹಿಮಗಡ್ಡೆಗಳು ತೇಲುತ್ತಿದ್ದ ದೃಶ್ಯ ಕಂಡಿತು. ಝರಿಗಳಲ್ಲೆಲ್ಲಾ ಜಲಪಾತಗಳು ಸೃಷ್ಟಿಯಾಗಿತ್ತು.

ಮರುದಿನ ಗ್ಯಾಂಗ್ ಟೋಕ್ ಸುತ್ತಲಿನ ವೀಕ್ಷಣೆ. 'ತಾಶೀ ವ್ಯೂ ಪಾಯಿಂಟ್', ಚಿಕ್ಕದಾದ, ಚೊಕ್ಕದಾದ ಆರ್ಕಿಡ್ ಗಾರ್ಡನ್ ನೋಡಿದೆವು. ವಿವಿಧ ಬಣ್ಣ ಬಣ್ಣದ ವಿಶಿಷ್ಟ ಪ್ರಬೇಧಗಳನ್ನು ಹೊಂದಿ ಮನಮೋಹಕವಾಗಿದೆ. ಗಣೇಶ್ ಟೋಕ್ ಎನ್ನುವ ಬೆಟ್ಟದ ಮೇಲೆ ಗಣೇಶನ ಗುಡಿ ಪ್ರಶಾಂತವಾಗಿದೆ. ಹನುಮಾನ್ ಟೋಕ್ ನಲ್ಲಿ ಹನುಮನ ಗುಡಿಯಿದೆ. ಸೈನಿಕ ಜನರೇ ಇದರ ಆಶ್ರಯದಾತರು. ಸುತ್ತಲಿನ ನೋಟ ಸುಂದರವಾಗಿದೆ. ಬೌದ್ಧ ಮಂದಿರವನ್ನು ಸಂದರ್ಶಿಸಿದೆವು. ಹಲವು ಬೌದ್ಧ ವಿದ್ಯಾರ್ಥಿಗಳಿಗೆ ಅಲ್ಲಿ ಆಶ್ರಯತಾಣವೂ ಇದೆ. ಸಿಕ್ಕಿಂ ಸರಕಾರದ ಪ್ರತಿಷ್ಠಿತ ಗುಡಿಕೈಗಾರಿಕೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸಂದರ್ಶಿಸಿ ಮರದ, ಬಿದಿರಿನ, ಉಣ್ಣೆಯ ಉತ್ಪನ್ನಗಳನ್ನು ಕಂಡೆವು. 'ಎಮ್. ಜಿ. ಮಾರ್ಗ' ಎಂಬ ವಿಸ್ತಾರವಾದ ರಸ್ತೆಯ ಇಕ್ಕೆಲಗಳೂ ಮುಖ್ಯ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿಯ ಜನರು ಸ್ನೇಹಮಯಿಗಳಾಗಿ ವರ್ತಿಸುತ್ತಾರೆ. ಪ್ರವಾಸೋದ್ಯಮ ಇವರ ಮುಖ್ಯ ಕಸುಬುಗಳಲ್ಲೊಂದು.

12-05-2015 ರಂದು ನ್ಯೂಜಲ್ ಪಾಯಿಗುರಿಗೆ ತೀಸ್ತಾ ನದೀ ತೀರದಲ್ಲೇ ಹಿಂದಿರುಗಿ ಪ್ರಯಾಣ ಮಾಡಿ ಮಧ್ಯಾಹ್ನ ತಲುಪಿದೆವು. ಅದಾಗಲೇ 2 ಬಾರಿ ಲಘು ಭೂಕಂಪನವೂ ಸಂಭವಿಸಿ ನಮ್ಮ ರೈಲು 3 ಗಂಟೆ ವಿಳಂಬವಾಯಿತು. ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮಾರ್ಗವಾಗಿ 14-05-2015 ರ ಮಧ್ಯಾಹ್ನ ಬೆಂಗಳೂರು ತಲುಪಿ ನಮ್ಮ ಯಾತ್ರೆ ಕೊನೆಗೊಂಡಿತು. ವಿವಿಧತೆಯಲ್ಲೂ ಏಕತೆಯನ್ನು ಉಳಿಸಿಕೊಂಡ ಭಾರತದ ಬಗ್ಗ್ಯೆ ಹೆಮ್ಮೆಯೆನಿಸಿತು.

"ಉತ್ತರಂ ಯತ್ ಸಮುದ್ರತ್ಯ ಹಿಮಾದ್ರೇಶ್ಚೈವ ದಕ್ಷಿಣಂ ವರ್ಷಂ ತದ್ ಭಾರತನ್ನಾಮ ಭಾರತೀಯತ್ರಸಂತತಿಃ"