ಭಾನುವಾರ, ಡಿಸೆಂಬರ್ 13, 2015

ಈಸ್ಟ್ ಇಂಡಿಯಾ ಪ್ರವಾಸ ಕಥನ

ದಿನಾಂಕ 30-04-2015 ರಂದು ಬೆಂಗಳೂರಿನ 'ಅಡಿಗಾಸ್ ಯಾತ್ರಾ' ಸಂಸ್ಥೆಯವರು ಪ್ರಾಯೋಜಿಸಿದ ಈಸ್ಟ್ ಇಂಡಿಯಾ ಯಾತ್ರೆಯಲ್ಲಿ 31 (+5 ಸಿಬ್ಬಂದಿಯವರು) ಜನರ ಗುಂಪಿನಲ್ಲಿ ನಾನೂ, ನನ್ನ ಪತ್ನಿ ವಿಜಯಲಕ್ಷ್ಮಿಯೂ ಯಾತ್ರಿಕರಾಗಿ ಬೆಂಗಳೂರಿನಿಂದ ಆಂಧ್ರಪ್ರದೇಶ ಮಾರ್ಗವಾಗಿ ಒರಿಸ್ಸಾ, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಸಂಚರಿಸಿದೆವು. 01-05-2015 ರ ರಾತ್ರೆ ಖುರ್ದಾರೋಕ್ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಬಸ್ಸಿನಲ್ಲಿ ಪುರಿ ತಲುಪಿ ಹೋಟೆಲಿನಲ್ಲಿ ತಂಗಿದೆವು.

02-05-2015 ರ ಬೆಳಗಿನ 05:30 ಕ್ಕೆ ಸರಿಯಾಗಿ ಬೆಳಕು ಹರಿದಿತ್ತು. ನಾವು ತಂಗಿದ್ದ ಹೋಟೆಲಿನ ಎದುರಿಗಿದ್ದ ಸಮುದ್ರ ತೀರಕ್ಕೆ ನಡೆದೆವು. ಅದಾಗಲೇ ಜನ ಮೀನುಗಾರಿಕೆಗೆ ಸೇರಿದ್ದರು. ಬೆಳಗಿನ ಹೊತ್ತು ಸಮುದ್ರದ ಗಾಳಿ ತಂಪಾಗಿತ್ತು. ಉಪಾಹಾರದ ನಂತರ 30 ಕಿ.ಮೀ. ಪ್ರಯಾಣಿಸಿ ಚಂದ್ರಭಾಗಾ ನದಿ ಸಂಗಮ ದಾಟಿ, ಸಮುದ್ರ ಕಿನಾರೆಗೆ ತೆರಳಿದೆವು. ಸಮುದ್ರ ಸ್ನಾನಕ್ಕಿಳಿದ ಮಕ್ಕಳ ದಂಡೇ ಅಲ್ಲಿತ್ತು. ಶಂಖ, ಚಿಪ್ಪು ಮಾರಾಟದ ಮಳಿಗೆಗಳಿದ್ದವು. ಒರಿಸ್ಸಾದ ರಸ ಬಾಳೆಹಣ್ಣುಗಳ ರಸದೌತಣ ಸವಿದು 3 ಕಿ.ಮೀ. ಅಂತರದಲ್ಲಿದ್ದ ಜಗತ್ಪ್ರಸಿದ್ಧ ಕೋನಾರ್ಕ್ ಸೂರ್ಯದೇವಾಲಯಕ್ಕೆ ತೆರಳಿದೆವು. ಗಂಗವಂಶದ ನರಸಿಂಹ ದೇವನಿಂದ 13 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಶಿಲ್ಪಕಲಾ ವೈಭವ ಅಮೋಘವೇ ಸರಿ. ಪುರಂದರ ಕೇಸರಿ ಎಂಬ ರಾಜ ಹಿಂದೆ ನಿರ್ಮಿಸಿದ ದೇವಾಲಯದಲ್ಲಿದ್ದ ಸೂರ್ಯದೇವನ ಮೂಲ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಯಿತಂತೆ. ಕಲ್ಲಿನಿಂದ ಕೆತ್ತಲಾದ 12 ಜೊತೆ ಚಕ್ರಗಳಿಂದ ಕೂಡಿದ 7 ಕುದುರೆಗಳಿಂದ ಎಳೆಯಲ್ಪಟ್ಟ ಸೂರ್ಯದೇವನ ಭವ್ಯ ರಥದ ಕಲ್ಪನೆಯಲ್ಲಿ ನಿರ್ಮಿಸಲಾದ ಒರಿಸ್ಸಾ ಶಿಲ್ಪಕಲಾ ಮಾದರಿ ಇದಾಗಿದೆ. ಸುಮಾರು 150 ಅಡಿಗಳೆತ್ತರದ ಗರ್ಭಗೃಹ, ಜಗಮೋಹನ, ವಿಶಾಲವಾದ ಭೋಗ ಮಂಟಪ, ಅಸಂಖ್ಯ ಪ್ರಾಣಿ, ಪಕ್ಷಿ ಮಿಥುನಶಿಲ್ಪಗಳಿಂದ ಆವೃತವಾಗಿದೆ. ಇಸ್ವಿ 1900 ರಲ್ಲಿ ಬಂಗಾಲದ ಗವರ್ನರ್ ಆಗಿದ್ದ ಜೋನ್ ವುಡ್ ಬರ್ನ್ ಶಿಥಿಲಾವಸ್ಥೆಗೆ ತಲುಪಿದ ಈ ಸ್ಮಾರಕವನ್ನು ಉಳಿಸಲು ಗರ್ಭಗೃಹದೊಳಕ್ಕೆ ಕಲ್ಲುಗಳನ್ನು ತುಂಬಿ ಭದ್ರಗೊಳಿಸಿ, ಸೂರ್ಯದೇವನ ಮೂಲ ವಿಗ್ರಹವನ್ನು ರಕ್ಷಿಸಿದ್ದು, ಇದೀಗ ದೆಹಲಿಯ ನ್ಯಾಷನಲ್ ಮ್ಯೂಸಿಯಂ ನಲ್ಲಿದೆ. ಕೋನಾರ್ಕದ ಅರುಣಸ್ಥಂಭ ಪುರಿ ಜಗನ್ನಾಥ ದೇವಾಲಯಕ್ಕೆ ಸ್ಥಳಾಂತರಗೊಂಡಿತ್ತು.

ನಮ್ಮ ಮುಂದಿನ ಪಯಣ ಧವಳಗಿರಿ. ಮೌರ್ಯ ವಂಶದ ಅಶೋಕ ಚಕ್ರವರ್ತಿ ಕಳಿಂಗಯುದ್ಧ ನಡೆಸಿ ಗೆದ್ದ. ಆದರೆ ಲಕ್ಷಾಂತರ ಜನರು ಸತ್ತು ಇಲ್ಲವೇ ಗಾಯಗೊಂಡು ಹತ್ತಿರದಲ್ಲಿ ಹರಿಯುವ ದಯಾನದಿಯ ನೀರೇ ರಕ್ತಸಿಕ್ತವಾಗಿ ಕೆಂಪಾದುದನ್ನು ಕಂಡು ಮನನೊಂದು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದು ಧವಳಗಿರಿಯಲ್ಲಿ. ಅಶೋಕನ ಶಿಲಾಶಾಸನವಿದೆ. ಬುದ್ಧನ ವಿಗ್ರಹವಿದೆ. ಸ್ತೂಪವು ಸುಂದರವೂ ಭವ್ಯವೂ ಆಗಿದೆ.

ನಮ್ಮ ಮುಂದಿನ ಪಯಣ ಭುವನೇಶ್ವರದ 11 ನೇ ಶತಮಾನದ ಲಿಂಗರಾಜ ದೇವಾಲಯ. ಇಲ್ಲಿನ ಗೋಪುರ 190 ಅಡಿಗಳಷ್ಟೆತ್ತರದ್ದು. ವಿಶಾಲ ಜಗಮೋಹನ, ಭೋಗಮಂಟಪ, ನಂದಿ ಹಾಗೂ ಅಸಂಖ್ಯ ಪರಿವಾರ ದೇವತೆಗಳ ಗುಡಿಗಳ ಸಮೂಹವಾಗಿದೆ. ಅಂದಿನ ಪಯಣದ ಮುಂದಿನ ಗುರಿ ಸಾಖಿ ಗೋಪಾಲಸ್ವಾಮಿ ದೇವಸ್ಥಾನ. ಅಮೃತಶಿಲಾ ವಿಗ್ರಹಗಳು, ಕೃಷ್ಣ ಗೋಪಿಕೆಯರ ರಾಸಕ್ರೀಡಾ ಪ್ರತಿಮೆಗಳು ಅಲ್ಲಿವೆ. ಪ್ರಶಾಂತ ಗ್ರಾಮವದು.

ನಮ್ಮ ಯಾತ್ರೆಯ 4 ನೇ ದಿನ ಜಗತ್ಪ್ರಸಿದ್ದ ಪುರಿ ಜಗನ್ನಾಥ ದೇವರ ದರ್ಶನವಾಯಿತು. ಭವ್ಯವಾದ ಗೋಪುರ ಶಿಖರ, ಭೋಗಮಂಟಪ ಇತ್ಯಾದಿಗಳಿವೆ. ವಿಶಾಲವಾದ ಪ್ರಕಾರವಿದೆ. ಪ್ರತಿದಿನ 56 ಬಗೆಯ ಮೃಷ್ಟಾನ್ನ ನೈವೇದ್ಯ ಭೋಜನವಾಗತಕ್ಕ ವಿಶಿಷ್ಟ ಸಂಪ್ರದಾಯವಿದೆ. ಮಣ್ಣಿನ ಪಾತ್ರೆಗಳಲ್ಲಿ 750 ಕ್ಕೂ ಮಿಕ್ಕಿದ ಒಲೆಗಳಲ್ಲಿ ನೈವೇದ್ಯ ತಯಾರಿಸಲ್ಪಟ್ಟು; ಮರುದಿನಕ್ಕೆ ಹೊಸ ಪಾತ್ರೆಗಳೇ ಬೇಕು ಎಂಬ ನಿಯಮವಿದೆ. ಸಂಪ್ರದಾಯವಿದೆ. ಖಾಯಂ ಆಗಿ ನೇಮಕಗೊಂಡ 6000 ನೌಕರ ವರ್ಗ, ದೇವಸ್ಥಾನವನ್ನೇ ಅವಲಂಬಿಸಿ ಬದುಕುವ 20000 ಜನರ ಸೇವೆ ಜಗನ್ನಾಥನಿಗೆ ನಿತ್ಯ ಲಭ್ಯ.

ನಮ್ಮ ಮುಂದಿನ ಪಯಣ ಸಮುದ್ರದ ಹಿನ್ನೀರಿನ ವಿಸ್ತಾರವಾದ 'ಚಿಲಿಕಾ' ಸರೋವರದೆಡೆಗೆ. ಅಲ್ಲಿ ದೋಣಿವಿಹಾರ ಪ್ರಥಮ ಆಕರ್ಷಣೆ. ಚಿತ್ರ ವಿಚಿತ್ರ ಆಕಾರದ ಮುತ್ತಿನ ಜೀವಿಗಳೂ ಕಾಣಲು ಲಭ್ಯ. ಮೀನುಗಾರಿಕೆ ಪರಿಸರದ ಜನರ ಕಾಯಕ. ನೂರಾರು ಗುಡ್ಡಗಾಡು ಜನಾಂಗ, ಜಾತಿಗಳಿಂದ ಕೂಡಿದ ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು. ಸಾಮಾಜಿಕವಾಗಿ ವಿಶಿಷ್ಟ ಸಂಪ್ರದಾಯಗಳಿಂದ, ಆಚರಣೆಗಳಿಂದ, ನೃತ್ಯ ನಾಟಕಗಳಲ್ಲಿ ಪ್ರೌಢಿಮೆಗಳಿಸಿದವರು. 'ಪಿಪ್ಲಿ'  ಗ್ರಾಮದ ಜನ ವಸ್ತ್ರ ಚಿತ್ರ ಕಸೂತಿ ಕಲೆ, ರಘುರಾಜಪುರದ ಓಲೆಗರಿಯಲ್ಲಿ (ತಾಳೆಗರಿ) ರಚಿಸುವ 'ಚಿತ್ರಪಟ' ಇತ್ಯಾದಿ ಸುಂದರ ಕಲೆಗಳ ಸಂಪನ್ನರು. ಅಂತಹ ಹಸುರಿನ ತಾಣದಿಂದ ರಾತ್ರೆ ನಮ್ಮ ಪಯಣ, ಮಹಾನದಿ ದಾಟಿ ಕೋಲ್ಕತ್ತಾದತ್ತ ಮುಂದುವರಿಯಿತು.

5 ನೇ ದಿನದ ಸೂರ್ಯೋದಯಕ್ಕೆ ಪಶ್ಚಿಮ ಬಂಗಾಳದಲ್ಲಿದ್ದೆವು. ಕೋಲ್ಕತ್ತಾ ಬ್ರಿಟಿಷ್ ವಸಾಹತುಶಾಹಿಗಳಿಂದ 3 ಶತಮಾನಗಳಷ್ಟು ಹಿಂದೆ ನಿರ್ಮಿಸಲ್ಪಟ್ಟ ನಗರ. ಇಂದು ಅತ್ಯಂತ ಜನ ನಿಬಿಡವೂ, ಭವ್ಯವೂ, ದಿವ್ಯವೂ, ಕಲುಷಿತವೂ ಆದ ನಗರ. ಬೆಳಗಿನ 8 ಗಂಟೆಗೆ ಹೌರಾ ರೈಲ್ವೆ ಸ್ಟೇಷನ್ ತಲುಪಿ ಹೂಗ್ಲೀ ನದಿಯ ಮೇಲೆ ನಿರ್ಮಿಸಿದ 705 ಮೀ. ಉದ್ದದ, ತಳದಿಂದ ಆಧಾರವಿಲ್ಲದ ಪ್ರಸಿದ್ಧವಾದ ಉಕ್ಕಿನ ಹೌರಾ ಸೇತುವೆ, 'ರಬೀಂದ್ರ ಸೇತು' ವನ್ನು ದಾಟಿ, ನಮ್ಮ ಹೋಟೆಲ್ ತಲುಪಿದೆವು. ಮುಂದೆ ನಾವು ಕೋಲ್ಕತ್ತಾ ನಗರದ ಪ್ರಾಣಿ ಸಂಗ್ರಹಾಲಯ/ ತೋಟಗಾರಿಕಾ ವನವನ್ನು ನೋಡಿದೆವು. ಕೆಲವು ಪ್ರಾಣಿ, ಪಕ್ಷಿಗಳು ವಿಶಿಷ್ಟ ಜಾತಿಯವು. ಅಲ್ಲಿಂದ 'ಸಯನ್ಸ್ ಸಿಟಿ' ತಲುಪಿದೆವು. ಪ್ರತಿಯೊಂದರ ವೀಕ್ಷಣೆಗೂ ಬೇರೆ ಬೇರೆ ಶುಲ್ಕ ತೆತ್ತು 'ಜುರಾಸಿಕ್ ಫೋರೆಸ್ಟ್' ಮಿರರ್, ಲೆನ್ಸ್ ವೈವಿದ್ಯಗಳು, 3D ಶೋ, ತಾರಾಲಯ ವೀಕ್ಷಣೆ ಇತ್ಯಾದಿಗಳನ್ನು ನೋಡಿದೆವು.

6 ನೇ ದಿನ ನಮ್ಮ ಯಾತ್ರೆ ಶ್ರೀ ರಾಮಕೃಷ್ಣ ಪರಮಹಂಸರು ನೆಲೆಸಿದ್ದ ದಕ್ಷಿಣೇಶ್ವರ ಕಾಳೀ ದೇಗುಲ ಸಮುಚ್ಚಯ. ದ್ವಾದಶ ಜ್ಯೋತಿರ್ಲಿಂಗಗಳ ಮಾದರಿ ಇದೆ. ಹೂಗ್ಲೀ (ಗಂಗಾ) ಸ್ನಾನಘಟ್ಟ ನೋಡಿದೆವು. ರಾಮಕೃಷ್ಣ ಪರಮಹಂಸರು ಧ್ಯಾನಸ್ಥರಾಗುತ್ತಿದ್ದ ವಿವಿಧ ಛಾಯಾಚಿತ್ರಗಳಿದ್ದ ಮಂಟಪವನ್ನು ನೋಡಿ, ನದಿಯ ಇನ್ನೊಂದು ತಟದಲ್ಲಿದ್ದ ಬೇಲೂರು ಮಠದತ್ತ ಸೇತುವೆ ದಾಟಿ ಮುಂದುವರಿದೆವು. ಬೇಲೂರು ಮಠ ರಾಮಕೃಷ್ಣ ಮಿಶನ್ ನ ಪ್ರಧಾನ ಕಚೇರಿ. ವಿಶಾಲವಾದ ತೋಪಿನಲ್ಲಿ ವಿವಿಧ ಸ್ಮಾರಕಗಳನ್ನೊಳಗೊಂಡಿದೆ. ರಾಮಕೃಷ್ಣರ, ವಿವೇಕಾನಂದರ ವಿವಿಧ ಛಾಯಾಚಿತ್ರಗಳ ಸಂಗ್ರಹವಿರುವ ಮ್ಯೂಸಿಯಂ ಇದೆ. ಸಾಹಿತ್ಯ ಮಳಿಗೆ ಇದೆ. ಸ್ನಾನಘಟ್ಟವಿದೆ. ಅಲ್ಲಿಂದ ಹೌರಾ ಮಾರ್ಗವಾಗಿ ಮುಂದೆ ಕೇಬಲ್ ಗಳನ್ನು ಅಳವಡಿಸಿ ನಿರ್ಮಿಸಿದ ತೂಗು ಸೇತುವೆ - ವಿದ್ಯಾಸಾಗರ್ ಸೇತುವನ್ನು ದಾಟಿದೇವು. ಅಲ್ಲಿಂದ ಮುಂದೆ ಸಾಗಿ ಪ್ರಸಿದ್ಧ 'ಶಕ್ತಿಪೀಠ'ವೆನಿಸಿದ ಕಾಳೀಘಾಟ್ ಕಾಳೀ ಮಂದಿರ ಸಂದರ್ಶಿಸಿ ದೇವಿಯ ದರ್ಶನ ಪಡೆದೆವು. ಇಲ್ಲಿ ದೇವಿಯಿಂದಲೂ ಭಯಂಕರವಾಗಿ ವರ್ತಿಸುವ ಪುಂಡರಿದ್ದಾರೆ (ಅರ್ಚಕಗಣ). ವಿಶಾಲವಾದ ಕೋಲ್ಕತ್ತಾದ ಬೀದಿಗಳಲ್ಲಿ ಸಂಚರಿಸಿದೆವು. ಪಾಶ್ಚಾತ್ಯರಿಗೆ ಯೋಗದ ಮಹತ್ವ ತಿಳಿಸಿದ ಗುರುದೇವ ರಬೀಂದ್ರನಾಥ ಟಾಗೋರರ ಕರ್ಮಭೂಮಿ ಕೋಲ್ಕತ್ತಾ. ವಿಕ್ಟೋರಿಯ ಮೆಮೋರಿಯಲ್ ಭವ್ಯವಾದ ಬ್ರಿಟಿಷ್ ಸ್ಮಾರಕವಾಗಿದೆ. ಅದರೊಳಗೆ ವಿವಿಧ ಕಲಾವಿದರಿಂದ ಚಿತ್ರಿಸಲಾದ ಪೈಂಟಿಂಗ್ ಗಳು, ಘಟನಾ ಚಿತ್ರಗಳು ಆಕರ್ಷಕವಾಗಿವೆ. ವಿಸ್ತಾರವಾದ ಹುಲ್ಲುಹಾಸು, ಕೊಳ ಇದೆ. ಕೋಲ್ಕತ್ತಾದಲ್ಲಿ ಬಹಳ ಪ್ರಖ್ಯಾತವಾದ ಇಂಡಿಯನ್ ಮ್ಯೂಸಿಯಂ (ರಜೆ ಇದ್ದುದರಿಂದ), ಬೊಟೇನಿಕಲ್ ಗಾರ್ಡನ್ ಸುತ್ತುವ ಅವಕಾಶ ಸಿಗಲಿಲ್ಲ್. ಕೋಲ್ಕತ್ತಾದಲ್ಲಿ ರಸ್ತೆಗಳ ಜೊತೆಯಲ್ಲೇ ವಿದ್ಯುಚ್ಚಾಲಿತ ಟ್ರಾಮ್ ಗಾಡಿಗಳು ಸಂಚರಿಸುತ್ತವೆ. ಹಾಗೇ ನೆಲದ ಮೇಲೆ ಹಾಗೂ ಸುರಂಗದೊಳಗೆ ಸಂಚರಿಸುವ ಮೆಟ್ರೋ ರೈಲು ಇದೆ. ಜೊತೆಜೊತೆಗೆ ತಳ್ಳುಗಾಡಿಗಳು, ಸೈಕಲ್ ರಿಕ್ಷಾಗಳು ಬಡ ಕಾರ್ಮಿಕ, ಶ್ರಮ ಜೀವಿಗಳ ಜೀವನಾಧಾರಗಳಾಗಿವೆ. ಬಂಗಾಳೀ, ನೇಪಾಳೀ, ಅಸ್ಸಾಂ, ಬಾಂಗ್ಲಾ ಮೂಲದ ಹಲವು ಜನಾಂಗಗಳ ಜನರನ್ನೂ ಇಲ್ಲೇ ನೋಡಬಹುದು, ಕೇಳಬಹುದು.

ಮರುದಿನ ನಮ್ಮ ಯಾತ್ರೆ ಕೋಲ್ಕತ್ತಾದ 'ಸೀಲ್ ಡಾ' ರೈಲು ನಿಲ್ದಾಣದಿಂದ ಬೆಳಗಿನ 6 ಗಂಟೆಗೆ ಪ್ರಾರಂಭವಾಯಿತು. ದಾರಿಯ ಎರಡೂ ಬದಿಗಳಲ್ಲೂ ಹಚ್ಚಹಸುರಿನ ವಿಶಾಲವಾದ ಗಂಗಾ ಬಯಲು, ಫಲವತ್ತಾದ ಕೃಷಿ ಭೂಮಿ ಕಣ್ಣೆತ್ತುವಷ್ಟು ದೂರಕ್ಕೂ ವ್ಯಾಪಿಸಿದೆ. ಗಂಗಾನದಿಗೆ ನಿರ್ಮಿಸಿದ 'ಫರಕ್ಕಾ ಬ್ಯಾರೇಜು' ಬಹಳ ಉದ್ದವಾಗಿದೆ, ನೀರಿನ ವಿಸ್ತಾರ ಬಹಳವಿದೆ. ಇಲ್ಲಿಂದಲೇ ಗಂಗಾನದಿಯ ಕವಲೊಂದು ಹೂಗ್ಲೀ ನದಿ ಸೇರುವುದು. ಅಲ್ಲಿಂದ 'ಕಿಶನ್ ಗಂಜ್' (ಬಿಹಾರ) ಮೂಲಕ 'ನ್ಯೂ ಜಲ್ ಪ್ವಾ ಗುರಿ' ವರೆಗೂ ಹಣ್ಣಿನ ತೋಪುಗಳು, ವಿವಿಧ ಕೃಷಿ ಭೂಮಿ ಇದೆ. ಸಂಜೆ ಅಲ್ಲಿಂದ ಸಿಲಿಗುರಿಗೆ ವಾಹನದಲ್ಲಿ ತೆರಳಿದೆವು. ಸಿಲಿಗುರಿ ಸಾಮಾನ್ಯವಾದ ನಗರ.

ಮರುದಿನ ಸಿಲಿಗುರಿಯಿಂದ ವಿಶಾಲವಾದ ಸಾಗುವಾನಿ ತೋಟಗಳ ಎಡೆಯಲ್ಲಿ, ಸೈನಿಕ ಶಿಬಿರಗಳ ಮಧ್ಯೆ ಸಾಗಿ ಬರಡಾದ ನದಿಯೊಂದನ್ನು ದಾಟಿ, ಕಡಿದಾದ ಬೆಟ್ಟ ಗುಡ್ಡಗಳನ್ನು ಬಳಸಿ ಏರಿಸಾಗಿದಾಗ ತಂಪು ಹವೆ, ಚಹಾ ತೋಟಗಳ ರಮ್ಯ ದರ್ಶನವಾಯಿತು. ಸಾವಿರಾರು ಎಕರೆ ಚಹಾ ತೋಟಗಳು ನೋಡಲು ಬಹಳ ಸುಂದರವಾಗಿವೆ. ಮಧ್ಯಾಹ್ನದ ವೇಳೆಗೆ 'ಮಿರಿಕ್' ಸರೋವರವನ್ನು ತಲುಪಿದೆವು. ಇದು ವಿಹಾರ ತಾಣ. ದೋಣಿವಿಹಾರ, ಕುದುರೆ ಸವಾರಿಗೆ ಅವಕಾಶವಿದೆ. ಮುಂದಿನ ನಮ್ಮ ಪಯಣ ಫಿರ್, ಪೈನ್, ಬರ್ಟ್ ಮರಗಳ ಅಂದುವೆ ಸಾಗಿತು. ಅಲ್ಲಲ್ಲಿ ಹಲವು ಜಾತಿಯ ಬಿದಿರು ಇದ್ದವು. ನೇಪಾಳದ ಗಡಿಯ 'ಪಶುಪತಿನಾಥ'ವೆಂಬ ಚಿಕ್ಕ ವ್ಯಾಪಾರಿ ಕೇಂದ್ರವನ್ನು ಸುತ್ತಿ ರಾತ್ರೆ ವೇಳೆಗೆ 7500 ಅಡಿಗಳೆತ್ತರದ 'ಚಾ ತೋಟಗಳ ರಾಣಿ' ಎನಿಸಿದ ಡಾರ್ಜಿಲಿಂಗ್ ತಲುಪಿದೆವು. ಈ ಪರ್ವತ ನಗರ ಅಂಕುಡೊಂಕು ರಸ್ತೆಗಳು, ಜನನಿಬಿಡ ವ್ಯಾಪಾರ ಕೇಂದ್ರಗಳು, ವಾಸಸ್ಥಳಗಳನ್ನೂ ಹೊಂದಿದೆ. ಪ್ರಧಾನ ರಸ್ತೆಯ ಜೊತೆಗೇ ಸಿಲಿಗುರಿಯಿಂದ ಡಾರ್ಜಿಲಿಂಗ್ ನ 'ಘೂಂ' ಎಂಬಲ್ಲಿಯ ತನಕ ಅಗಲಕಿರಿದಾದ (Toy Train) ಟಾಯ್ ಟ್ರೈನ್ ಹಳಿ ಇದೆ. ಇಲ್ಲೆಲ್ಲಾ ಜೀಪು, ಟಾಟಾ ಸುಮೋ ದಂತಹ ವಾಹನಗಳೇ ಮುಖ್ಯ ವಾಹಿನಿಗಳು. ಚಳಿ ಚಳಿಯಾದ ಹವೆ. ಹಿಂದೂ ಸಮುದಾಯದವರ ಜೊತೆ ನೇಪಾಳಿ, ಸಿಕ್ಕಿಂ, ಅಸ್ಸಾಂ ಜನಾಂಗಗಳ ಜನರೂ ಬೆರೆತಿದ್ದಾರೆ. ನೇಪಾಳೀ, ಸಿಕ್ಕಿಂ, ಹಿಂದಿ ಭಾಷೆಗಳು ಪ್ರಧಾನ ಭಾಷೆಗಳು.

ಯಾತ್ರೆಯ 9 ನೇ ದಿನ ಬೆಳಗಿನ ಜಾವ 4 ಗಂಟೆಗೆ ನಾವು ಜೀಪಿನಲ್ಲಿ 'ಟೈಗರ್ ಹಿಲ್' ಗೆ ಪ್ರಯಾಣಿಸಿದೆವು. ಬೆಳಗಿನ 5 ರಿಂದ 5:15 ರೊಳಗೆ ಸೂರ್ಯೋದಯವಾಗುವುದು ಇಲ್ಲಿನ ವಾಡಿಕೆ. ಕಾಂಚನಜುಂಗಾ ಪರ್ವತ ಶಿಖರದಲ್ಲಿ ಸೂರ್ಯೋದಯದ ಮೊದಲ ಹೊಂಗಿರಣ ಕಾಣಿಸಿದಾಗ ಬೆಳಕಿನ ಹಲವು ಚಿತ್ತಾರಗಳನ್ನು, ಬೆಳ್ಳಿ, ಬಂಗಾರದ ಬಣ್ಣದಲ್ಲಿ ಹೊಳೆಯುವ ಪರ್ವತ ಶಿಖರದ ವೀಕ್ಷಣೆಗಾಗಿ ಜನ ಬಂದು ಕಾದಿರುತ್ತಾರೆ. ಹಿಂದಿನ ದಿನ ಮಳೆಯಾದುದರಿಂದ ನಾವು ಹೋದ ದಿನ ಮಂಜಿನ ಬಿಳಿ ಹೊದಿಕೆ ಮಾತ್ರ ಕಾಣಿಸಿ ಬೆಳಕಾಯಿತು. ಸೂರ್ಯ ಬರಲಿಲ್ಲ. ಆದರೆ ಖರೀದಿಸಿದ (DVD) ಡಿ.ವಿ.ಡಿ ಹಾಕಿ, ವಿರಾಮದ ವೇಳೆ ಕಾಂಚನಜುಂಗಾದ ಮೇಲಿನ ಸೂರ್ಯೋದಯ ಕಂಡು ತೃಪ್ತಿಪಟ್ಟೆವು. ಅಲ್ಲಿಂದ ಹಿಂದಿರುಗಿ 'ಘೂಂ' ಮೊನೆಸ್ಟರಿ (ಬೌದ್ಧ ಮಂದಿರ) ನೋಡಿದೆವು. ಗುಡ್ಡದ ಮೇಲಿನ 'ಬಟೇಸಿಯಾ ಲೂಪ್ ವಾರ್ ಮೆಮೋರಿಯಲ್' ವೀಕ್ಷಿಸಿದೆವು. ನಗರದ ಇನ್ನೊಂದು ಭಾಗದಲ್ಲಿ 5 ಕಿ.ಮೀ. ಉದ್ದದ ರೋಪ್ ವೇ ಯಲ್ಲಿ ಚಲಿಸಿ ಹೊಳೆಯುವ ಕಾಂಚನಜುಂಗಾ ಬೆಟ್ಟಗಳ ಸಾಲು, ಚಹಾ ತೋಟಗಳ ರಮ್ಯ ನೋಟ ನೋಡಿದೆವು. ಡಾರ್ಜಿಲಿಂಗ್ ನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. 'ತೇನ್ ಸಿಂಗ್ ರಾಕ್' ಹಿಮಾಲಯನ್ ಮೌಂಟನಿಯರಿಂಗ್ ಇನ್ಸ್ ಸ್ಟಿ ಟ್ಯೂಟ್, 'ಪದ್ಮಜಾ ನಾಯ್ಡು' ಜುವಾಲೋಜಿಕಲ್ ಪಾರ್ಕ್ ಇತ್ಯಾದಿಗಳನ್ನು ಕಂಡೆವು. ತೇನ್ ಸಿಂಗ್ 1953 ರಲ್ಲಿ ಎವರೆಸ್ಟ್ ಶಿಖರ ಏರಿದ ಕುರುಹಾಗಿ ಅವರು ಬಳಸಿದ ವಸ್ತುಗಳ ಸಂಗ್ರಹ, ಪರ್ವತಾರೋಹಿಗಳು, ಅವರ ವಿವಿಧ ಸಾಧನೆಗಳ ಸವಿಸ್ತಾರ ಚಿತ್ರವಿದೆ. ಪುರುಷ ಹಾಗೂ ಮಹಿಳಾ ಪರ್ವತಾರೋಹಿಗಳಿಗೆ ಮಾರ್ಗದರ್ಶನ, ಸಹಕಾರ ನೀಡುತ್ತಿರುವ ಉತ್ತಮ ಸಂಸ್ಥೆ ಇದಾಗಿದೆ. ಚಹಾ, ಉಣ್ಣೆಯ ಉಡುಪುಗಳಿಗೆ ಡಾರ್ಜಿಲಿಂಗ್ ಪ್ರಸಿದ್ಧವಾಗಿದೆ. ಪ್ರವಾಸೋದ್ಯಮ ಇನ್ನೊಂದು ಉದ್ದಿಮೆ.

ಯಾತ್ರೆಯ 10 ನೇ ದಿನ ನಾವು ಡಾರ್ಜಿಲಿಂಗ್ ನಿಂದ ತೀಸ್ತಾ ನದಿ ವರೇಗಿನ ಹಾದಿಯಲ್ಲಿ ಇಳಿಯುತ್ತಾ ಸಾಗಿದೆವು. ಕವಿ ರಬೀಂದ್ರನಾಥ ಟಾಗೋರರು ಬೇಸಿಗೆಯಲ್ಲಿ ಉಳಿಯುತ್ತಿದ್ದ ಬಂಗಲೆ, ಅವರ ಕೆಲವು ಚಿತ್ರಕಲಾ ಸಂಗ್ರಹಗಳು ನೋಡಲು ಲಭ್ಯವಾದವು. ತೀಸ್ತಾ ನದಿಯಲ್ಲಿ ರಬ್ಬರ್ ಬೋಟುಗಳಲ್ಲಿ ರಾಪ್ಟಿಂಗ್ ಕ್ರೀಡೆಗಳು ಕಾಣಸಿಕ್ಕಿದವು. ತೀಸ್ತಾ ನದೀ ತಟದಲ್ಲೇ ಏರುತ್ತಾ ಸಾಗಿದರೆ ಸಿಕ್ಕಿಂ ರಾಜಧಾನಿ ಗ್ಯಾಂಗ್ ಟೋಕ್ ಗೆ ಡಾರ್ಜಿಲಿಂಗ್/ ಸಿಲಿಗುರಿ ಗಳಿಂದ ೬ ಗಂಟೆಗಳ ದಾರಿ ಪ್ರಯಾಣ. 5500 ಅಡಿಗಳೆತ್ತರದ ಸುಂದರ, ಸ್ವಚ್ಛ ಪರ್ವತ ತಾಣ ಗ್ಯಾಂಗ್ ಟೋಕ್.

11 ನೇ ದಿನ ನಮ್ಮ ಬೆಳಗಿನ ಪಯಣ- ತ್ಸಾಂಗು ಲೇಕ್ (Tsomgo Lake) 12400 ಅಡಿಗಳ ಎತ್ತರದಲ್ಲಿದೆ. ಸ್ವಚ್ಛ ಗಾಳಿ, ಬಿಸಿಲು ಆಹ್ಲಾದಕರವಾಗಿತ್ತು. ಬೆಳಗಿನ 10 ಗಂಟೆ ಸಮಯದಲ್ಲಿ ಸರೋವರ ಸ್ಫಟಿಕದಂತೆ ಹೊಳೆಯುತ್ತಿತ್ತು. ಅಲ್ಲಿ ಚಮರೀ ಮೃಗಗಳನ್ನು ಸವಾರಿ ಮಾಡಿಸುವ ಹವ್ಯಾಸಿಗಳಿದ್ದರು. ಚಳಿ ತಡೆದುಕೊಳ್ಳಲು ಅವಶ್ಯವಾದ ಮೊಣಕಾಲು ತನಕ ಮುಚ್ಚುವ ಬೂಟುಗಳು ಹಾಗೂ ಕೈ ಚೀಲಗಳು ಬಾಡಿಗೆಗೆ ಅಲ್ಲಿ ಲಭ್ಯವಿದೆ. ಮುಂದುವರಿದ ನಮ್ಮ 'ಬೋಲೆರೋ' ವಾಹನಕ್ಕೆ ಹಿಮಗಡ್ಡೆಗಳು, ಬಿಳಿ ಹೂವಿನಂತೆ ಕಾಣುವ ಹಿಮದ ಹೊದಿಕೆ ಇಕ್ಕೆಲಗಳಲ್ಲೂ ಕಾಣಿಸಿತು. ಅಲ್ಲಲ್ಲಿ ಚಿಕ್ಕ ಸರೋವರಗಳೂ ಗೋಚರಿಸಿದವು. (Kup-Up) ಕುಪ್-ಅಪ್ ಎಂಬ ಗ್ರಾಮ ಕಾಣಸಿಕ್ಕಿತು. ಅಲ್ಲಲ್ಲಿ 'ಚೈನೀಸ್ ಒಬ್ಸರ್ವೇಶನ್ ಸ್ಪಾಟ್ಸ್' ಎಂಬ ಫಲಕಗಳು ಕಾಣಸಿಕ್ಕಿದವು. 14150 ಅಡಿ ಎತ್ತರದಲ್ಲಿರುವ ಪುರಾತನ ಚೀನಾ - ಭಾರತ ಸಿಲ್ಕ್ ರೂಟ್ ನಲ್ಲಿರುವ 'ನಥುಲಾ' ತಲುಪಿದೆವು. ಭಾರತೀಯ ಸೈನ್ಯದ ಪಂಜಾಬ್ 23 ನೇ ರೆಜಿಮೆಂಟಿನ ಭಾಭಾ ಹರಭಜನ್ ಸಿಂಗ್ ಎಂಬ ಸಿಪಾಯಿ 1968, ಒಕ್ಟೋಬರ್ 4 ರಂದು ಆಕಸ್ಮಿಕವಾಗಿ ಜಾರಿಬಿದ್ದು ತೀರಿಕೊಂಡಾತನ ಸ್ಮಾರಕ ಇಲ್ಲಿದೆ. ಆತನ ಆತ್ಮ ಇಂದಿಗೂ ಜೀವಂತವಾಗಿದ್ದುಭಾರತೀಯ ಸೈನಿಕರಿಗೆ ಸಹಾಯ ಮಾಡುತ್ತಿದೆ, ಅವಶ್ಯವಿದ್ದಾಗ ಸೂಕ್ಷ್ಮ ಮಾಹಿತಿ ಲಭ್ಯವಾಗುತ್ತಿದೆ, ಎಂಬ ಸೈನಿಕರ ನಂಬಿಕೆಯಿಂದ ಹಿಮದ ಹೊದಿಕೆಯ ಮೇಲೆ ಕೊರೆವ ಚಳಿಯಲ್ಲಿ ನಿರ್ಮಿಸಿದ ಸ್ಮಾರಕವಿದು. ಸೈನಿಕನ ಶರೀರ ಸಿಕ್ಕಲ್ಲಿ ಮೂಲ ಸಮಾಧಿ ಇದೆ. ಅಲ್ಲೂ ಸೈನಿಕರೇ ಕಾವಲಿದ್ದು ಪ್ರಯಾಣಿಕರಿಗೆ ಚಹಾ ನೀಡಿ ಸತ್ಕರಿಸುತ್ತಿದ್ದಾರೆ. ನಮ್ಮ ದೇಶದ ಸರಹದ್ದನ್ನು ನಮ್ಮ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ಪಣವಾಗಿಟ್ಟು ಬದುಕುತ್ತಿರುವ ಧೀರ ಯೋಧರಿಗೆ ಇದೋ ನಮನ!

ನಮ್ಮ ಮುಂದಿನ ಪಯಣಕ್ಕೆ ಮಧ್ಯಾಹ್ನ ಕವಿದ ಮೋಡ, ಜಿನುಗು ಮಳೆ, ಆಲಿಕಲ್ಲಿನಂತಹ ಹಿಮಪಾತ ತಡೆಯಾಯಿತು. ಹಿಮದ ಹೊದಿಕೆ ಹೊರಗಿನ ದೃಶ್ಯವನ್ನು ಮರೆಮಾಚಿತು. ನಾವು ಹಿಂದಿರುಗಿ ತ್ಸಾಂಗು ಲೇಕ್ ತಲುಪಿದಾಗ ಹಿಮಗಡ್ಡೆಗಳು ತೇಲುತ್ತಿದ್ದ ದೃಶ್ಯ ಕಂಡಿತು. ಝರಿಗಳಲ್ಲೆಲ್ಲಾ ಜಲಪಾತಗಳು ಸೃಷ್ಟಿಯಾಗಿತ್ತು.

ಮರುದಿನ ಗ್ಯಾಂಗ್ ಟೋಕ್ ಸುತ್ತಲಿನ ವೀಕ್ಷಣೆ. 'ತಾಶೀ ವ್ಯೂ ಪಾಯಿಂಟ್', ಚಿಕ್ಕದಾದ, ಚೊಕ್ಕದಾದ ಆರ್ಕಿಡ್ ಗಾರ್ಡನ್ ನೋಡಿದೆವು. ವಿವಿಧ ಬಣ್ಣ ಬಣ್ಣದ ವಿಶಿಷ್ಟ ಪ್ರಬೇಧಗಳನ್ನು ಹೊಂದಿ ಮನಮೋಹಕವಾಗಿದೆ. ಗಣೇಶ್ ಟೋಕ್ ಎನ್ನುವ ಬೆಟ್ಟದ ಮೇಲೆ ಗಣೇಶನ ಗುಡಿ ಪ್ರಶಾಂತವಾಗಿದೆ. ಹನುಮಾನ್ ಟೋಕ್ ನಲ್ಲಿ ಹನುಮನ ಗುಡಿಯಿದೆ. ಸೈನಿಕ ಜನರೇ ಇದರ ಆಶ್ರಯದಾತರು. ಸುತ್ತಲಿನ ನೋಟ ಸುಂದರವಾಗಿದೆ. ಬೌದ್ಧ ಮಂದಿರವನ್ನು ಸಂದರ್ಶಿಸಿದೆವು. ಹಲವು ಬೌದ್ಧ ವಿದ್ಯಾರ್ಥಿಗಳಿಗೆ ಅಲ್ಲಿ ಆಶ್ರಯತಾಣವೂ ಇದೆ. ಸಿಕ್ಕಿಂ ಸರಕಾರದ ಪ್ರತಿಷ್ಠಿತ ಗುಡಿಕೈಗಾರಿಕೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸಂದರ್ಶಿಸಿ ಮರದ, ಬಿದಿರಿನ, ಉಣ್ಣೆಯ ಉತ್ಪನ್ನಗಳನ್ನು ಕಂಡೆವು. 'ಎಮ್. ಜಿ. ಮಾರ್ಗ' ಎಂಬ ವಿಸ್ತಾರವಾದ ರಸ್ತೆಯ ಇಕ್ಕೆಲಗಳೂ ಮುಖ್ಯ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿಯ ಜನರು ಸ್ನೇಹಮಯಿಗಳಾಗಿ ವರ್ತಿಸುತ್ತಾರೆ. ಪ್ರವಾಸೋದ್ಯಮ ಇವರ ಮುಖ್ಯ ಕಸುಬುಗಳಲ್ಲೊಂದು.

12-05-2015 ರಂದು ನ್ಯೂಜಲ್ ಪಾಯಿಗುರಿಗೆ ತೀಸ್ತಾ ನದೀ ತೀರದಲ್ಲೇ ಹಿಂದಿರುಗಿ ಪ್ರಯಾಣ ಮಾಡಿ ಮಧ್ಯಾಹ್ನ ತಲುಪಿದೆವು. ಅದಾಗಲೇ 2 ಬಾರಿ ಲಘು ಭೂಕಂಪನವೂ ಸಂಭವಿಸಿ ನಮ್ಮ ರೈಲು 3 ಗಂಟೆ ವಿಳಂಬವಾಯಿತು. ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮಾರ್ಗವಾಗಿ 14-05-2015 ರ ಮಧ್ಯಾಹ್ನ ಬೆಂಗಳೂರು ತಲುಪಿ ನಮ್ಮ ಯಾತ್ರೆ ಕೊನೆಗೊಂಡಿತು. ವಿವಿಧತೆಯಲ್ಲೂ ಏಕತೆಯನ್ನು ಉಳಿಸಿಕೊಂಡ ಭಾರತದ ಬಗ್ಗ್ಯೆ ಹೆಮ್ಮೆಯೆನಿಸಿತು.

"ಉತ್ತರಂ ಯತ್ ಸಮುದ್ರತ್ಯ ಹಿಮಾದ್ರೇಶ್ಚೈವ ದಕ್ಷಿಣಂ ವರ್ಷಂ ತದ್ ಭಾರತನ್ನಾಮ ಭಾರತೀಯತ್ರಸಂತತಿಃ"

ಭಾನುವಾರ, ನವೆಂಬರ್ 8, 2015

ಚಾರ್ ಧಾಮ್ ಯಾತ್ರೆ - 2015

ಮಂಗಳೂರಿನ ಪ್ರತಿಷ್ಟಿತ ಪ್ರವಾಸೋದ್ಯಮ ಸಂಸ್ಥೆಯಾದ 'ನಿರ್ಮಲಾ ಟ್ರಾವೆಲ್ಸ್'ನವರು ಆಯೋಜಿಸಿದ 20 ದಿನಗಳ ಚಾರ್ ಧಾಮ್ ಯಾತ್ರೆಯ ಸದಸ್ಯನಾಗಿ ನಾನು ದಿನಾಂಕ 02-10-2015ರ ಸಂಜೆ ಮಂಗಳೂರು ಜಂಕ್ಶನ್ (ಕಂಕನಾಡಿ) ರೈಲು ನಿಲ್ದಾಣದಿಂದ ನನ್ನ ಯಾತ್ರೆ ಪ್ರಾರಂಭಿಸಿದೆ. ಮಂಗಳಾ ಎಕ್ಸ್ ಪ್ರೆಸ್ ಟ್ರೈನು 08:15 (P.M.) ಕ್ಕೆ ಮಂಗಳೂರಿನಿಂದ ಹೊರಟು 04-10-2015 ರ ಸಂಜೆ 04:30 ಕ್ಕೆ ದೆಹಲಿ ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ತಲುಪಿತು. ರೈಲು ನಿಲ್ದಾಣದಿಂದ ನಿರ್ಮಲಾ ಟ್ರಾವೆಲ್ಸ್ನವರು ಕಳುಹಿಸಿದ್ದ ಟ್ಯಾಕ್ಸಿಯಲ್ಲಿ ಮಂಗಳೂರು ಉಡುಪಿಗಳಿಂದ ಬಂದಿದ್ದ ನಾವು ನಾಲ್ಕು ಜನರೂ 'ಕರೋಲ್ ಭಾಗ್' ತಲುಪಿ ಹೋಟೆಲ್ ಸನ್ ಸ್ಟಾರ್ ರೆಸಿಡೆನ್ಸಿಯಲ್ಲಿ ರೂಮು ಪಡೆದೆವು. ಉಡುಪಿಯಿಂದ ಬಂದಿದ್ದ ಹೆಬ್ರಿಯ ಶ್ರೀ. ಉಮೇಶ್ ನಾಯಕ್ ರವರು ಸಹಯಾತ್ರಿಗಳಾಗಿ ಕೊಠಡಿ ಹಂಚಿಕೊಂಡೆವು. ಹಿಂದಿ ಭಾಷೆ ಬಲ್ಲ ಅವರು ನನಗೆ ಮಾರ್ಗದರ್ಶಿಯಾಗಿ ಸಹಕರಿಸಿದರು.

ಮರುದಿನ 05-10-2015 ರ ಬೆಳಿಗ್ಗೆ ದೆಹಲಿಯಿಂದ ಹರಿದ್ವಾರಕ್ಕೆ DL1P-C-6989 (Tourist) 27 ಸೀಟುಗಳ ಹವಾ ನಿಯಂತ್ರಿತ ಬಸ್ಸಿನಲ್ಲಿ ಪ್ರಯಾಣ ಮಾಡಿ ಸಂಜೆ ಹರಿದ್ವಾರದ ಜೈನ್ ಮಂದಿರದ ಎದುರಿನ 'ಪೆರಿವಾಲ್' ಹೋಟೆಲಿನಲ್ಲಿ ವಾಸ್ತವ್ಯ ಮಾಡಿದೆವು. ನಮ್ಮ ಚಾರ್ ಧಾಮ್ ಯಾತ್ರೆಗೆ ಬಂದವರ ಒಟ್ಟು ಸಂಖ್ಯೆ 22. 60-70 ವಯೋಮಾನದ 10 ದಂಪತಿಗಳು, 62ರ ನನ್ನ ಜೊತೆಗೆ 39 ವಯಸ್ಸಿನ ಉಮೇಶ್ ನಾಯಕ್ ಅತ್ಯಂತ ಕಿರಿಯರು.

ನಮ್ಮ ತಂಡದಲ್ಲಿ ಸಂಗೀತ, ಲಲಿತಾಸಹಸ್ರನಾಮ, ರುದ್ರ, ಚಮಕ ಇತ್ಯಾದಿ ವೇದಮಂತ್ರ ಬಲ್ಲವರೂ ಇದ್ದರು. ಗಾಯನ, ಪಠಣ ಅವ್ಯಾಹತವಾಗಿ ಯಾತ್ರೆಯ ಉದ್ದಕ್ಕೂ ಕೇಳಿಸುತ್ತಿತ್ತು. ಮಂಗಳೂರಿನಿಂದ ಬಂದಿದ್ದ ನಿವೃತ್ತ ಪ್ರಿನ್ಸಿಪಾಲ್ ಡಾಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟರು ಸಂಸ್ಕೃತ ವಿದ್ವಾಂಸರು. ತಾರ್ಕಿಕವಾಗಿ ಧರ್ಮ-ಕರ್ಮಗಳ ಬಗ್ಗ್ಯೆ ವಾದ, ವಿಮರ್ಶೆ ಮಾಡುತ್ತಿದ್ದರು. ಸಂಜೆ ಹರಿದ್ವಾರ ತಲುಪಿದ ನಾವು ತಡಮಾಡದೆ ಗಂಗಾತಟದಲ್ಲಿರುವ ಹರ್ ಕಿ ಪೌರಿ ತಲುಪಿ, ಸಂಜೆಯ 06:15 ರ ನಂತರ ಪ್ರಾರಂಭವಾದ ಭಜನೆ, ಗಂಟಾನಾದ, ಜೈಕಾರಗಳ ಮಧ್ಯೆ 'ಗಂಗಾ ಆರತಿ' ನೋಡಿದೆವು. ಅಲ್ಲಿಂದ ಸೇತುವೆ ದಾಟಿ ಗಂಗಾಮಂದಿರದಲ್ಲಿ ಗಂಗಾದೇವಿ ದರ್ಶನ ಮಾಡಿ ಪ್ರಸಾದ ಪಡೆದೆವು. ಜನನಿಬಿಡ ಯಾತ್ರಾರ್ಥಿಗಳಿಂದ ತುಂಬಿದ್ದ ಬೀದಿಯಲ್ಲಿ ನಡೆದು ಮುಂದೆ ಆಟೋದಲ್ಲಿ ಹೋಟೆಲ್ ತಲುಪಿದೆವು. ನನ್ನ ಜೊತೆಯಾಗಿ ಶ್ರೀ ಗೋಪಾಲಕೃಷ್ಣ ಭಟ್ (ಜಿ. ಎನ್. ಭಟ್) ದಂಪತಿಗಳಿದ್ದರು. ಆ ಸಂಜೆ ಉಮೇಶ್ ನಾಯಕ್ ರು ಅವರ ಕಾಶಿ ಮಠದ ಹಿರಿಯ ಯತಿಗಳನ್ನು ಭೇಟಿಯಾಗಿ ರಾತ್ರೆ ಹಿಂದಿರುಗಿ ಕೊಠಡಿ ಸೇರಿಕೊಂಡರು.

ಮರುದಿನ ತಾ 06-10-2015 ರ ಬೆಳಿಗ್ಗೆ 6 ಗಂಟೆಗೆ ಗಂಗಾತೀರ (ಹಿಂದಿನ ದಿನದ ಗಂಗಾರತಿ ನಡೆದ ಸ್ಥಳ) ತಲುಪಿ ರಭಸದಿಂದ ಹರಿಯುವ ಗಂಗಾನದಿಯಲ್ಲಿ ಆಧಾರವಾಗಿ ನಿಲ್ಲಿಸಿದ ಸಂಕೋಲೆಗಳನ್ನು ಹಿಡಿದು ಗಂಗಾಮಾತೆಯನ್ನು ಸ್ತುತಿಸಿ ಮುಳುಗು ಹಾಕಿ ಸ್ನಾನ ಮಾಡಿದೆವು. ಸೂರ್ಯೋದಯದ ಆ ಘಳಿಗೆ ಆಹ್ಲಾದಕರವಾಗಿತ್ತು. ಮುಂದೆ ನಾವೆಲ್ಲಾ ಹೋಟೆಲ್ ಗೆ ತೆರಳಿ, ಬಟ್ಟೆ ಬದಲಿಸಿ, ಉಪಹಾರ ಮುಗಿಸಿ, ಬಸ್ಸಿನಲ್ಲಿ ಹೃಷಿಕೇಶಕ್ಕೆ ಪ್ರಯಾಣ ಮಾಡಿದೆವು. ಸುಮಾರು 09 ಗಂಟೆಗೆ ಅಲ್ಲಿ ತಲುಪಿದೆವು. ಗೈಡ್ ಜೊತೆಗಿದ್ದು ಗಂಗಾದೇವಿ ಮಂದಿರ, ರಾಧಾಕೃಷ್ಣ ಮಂದಿರ, ಲಕ್ಷ್ಮಣದೇವ ಮಂದಿರ (ಭಾರತದಲ್ಲಿ ಅದೊಂದೇ ಲಕ್ಷ್ಮಣ ಮಂದಿರ), ವಿಶ್ವನಾಥ ಮಂದಿರಗಳನ್ನು ಸಂದರ್ಶಿಸಿದೆವು. ವಿವಿಧ ರುಧ್ರಾಕ್ಷಿಗಳನ್ನು, ಮಣಿ ಮಾಲೆಗಳನ್ನು ಮಾರುವ 'ಹರೇ ಕೃಷ್ಣ' ಮಳಿಗೆಗೆ ಹೋಗಿ ಬಂದೆವು. 1927 ರಲ್ಲಿ ನಿರ್ಮಿಸಲಾದ ಲಕ್ಷ್ಮಣ ಝೂಲಾ ಎಂಬ ತೂಗುಸೇತುವೆ ದಾಟಿ ಜೀಪಿನಲ್ಲಿ ಸ್ವರ್ಗಾಶ್ರಮಕ್ಕೆ ಬಂದೆವು. ಮುಂದೆ ರಾಮೇಶ್ವರ ಲಿಂಗವಿರುವ ದೇವಸ್ಥಾನಕ್ಕೆ ಪ್ರವೇಶಿಸಿದೆವು. ಅಲ್ಲೇ ಸನಿಹದಲ್ಲಿ ಖಾದಿ ಉಡುಪುಗಳ ಮಳಿಗೆ ಸಂದರ್ಶಿಸಿದೆವು. ಅಲ್ಲಿಂದ ನದೀ ತೀರಕ್ಕೆ ಇಳಿದೆವು. ಅಲ್ಲೇ ರಾಮ ಝೂಲಾ ಎಂಬ ತೂಗುಸೇತುವೆ ಇದೆ. ಅದರ ಕೆಳಭಾಗದಲ್ಲಿ ಯಾಂತ್ರಿಕ ದೋಣಿಯಲ್ಲಿ ಕುಳಿತು ನದಿ ದಾಟಿದೆವು. ಅಲ್ಲಿಂದ ಹೃಷಿಕೇಶ ಬಸ್ ಸ್ಟಾಂಡಿಗೆ ರಿಕ್ಷಾದಲ್ಲಿ ಹೋದೆವು. ಅಲ್ಲೇ ಪಕ್ಕದಲ್ಲಿ ಉತ್ತರಾಖಂಡ್ ಪಿಲಿಗ್ರಿಮ್ ರಿಜಿಸ್ಟ್ರೇಶನ್ ಸೆಂಟರ್ ನಲ್ಲಿ ಉಚಿತವಾಗಿ ನಮ್ಮ ನಮ್ಮ I.D ಕಾರ್ಡ್ ತೋರಿಸಿ ಬಯೋಮೆಟ್ರಿಕ್ ಕಾರ್ಡ್ ಪಡೆದೆವು. ಅದರಲ್ಲಿ ನಾವು ಚಾರ್ ಧಾಮ್ ಗಳನ್ನು ಸಂದರ್ಶಿಸಲಿರುವ ದಿನಾಂಕ ಹಾಗೂ ಪ್ರಯಾಣಿಸಲಿರುವ ವಾಹನದ ನಂಬ್ರ ನಮೂದಿಸಿರುತ್ತದೆ. ಅಲ್ಲಿಂದ ನಾವೆಲ್ಲರೂ ಹರಿದ್ವಾರಕ್ಕೆ ಹಿಂದಿರುಗಿ ಬಂದೆವು. ಮಧ್ಯಾಹ್ನದ ನಂತರ ಭಾರತ್ ಮಾತಾ ಮಂದಿರ, ಪವನ್ ಧಾಮ್, ಸಂದರ್ಶಿಸಿದೆವು. ಅವೆಲ್ಲ ನೂತನ ದೇವತಾ ಸಂಕೀರ್ಣಗಳು. ಪವನ್ ಧಾಮ ಗಾಜಿನಿಂದ ತಯಾರಿಸಿದ ದೇವತೆಗಳ ಕಥಾನಕಗಳ ಸಂಕೀರ್ಣವಾಗಿದೆ. ಮುಂದೆ ನದಿಯ ತಟದಲ್ಲೇ ಪ್ರಯಾಣ ಮಾಡಿ ರೋಪ್ ವೇ ಯಲ್ಲಿ ಬೆಟ್ಟ ಏರಿ ಮನಸಾದೇವಿ ಮಂದಿರ ಸಂದರ್ಶಿಸಿದೆವು. ಅಲ್ಲಿಂದ ರೋಪ್ ವೇ ಮೂಲಕವೇ ಕೆಳಗೆ ಬಂದು ನದೀ ತೀರದಲ್ಲಿ ನಡೆದು ಗಂಗಾಮಂದಿರ, ಹರ್ ಕಿ ಪೌರಿ, ಸಾಲು ಸಾಲು ಅಂಗಡಿಗಳ ನಡುವೆ ನಡೆದು ರಿಕ್ಷಾದಲ್ಲಿ ಹೋಟೆಲಿಗೆ ಹಿಂದಿರುಗಿದೆವು.

ನಮ್ಮ ಯಾತ್ರೆಯ ಆರನೇ ದಿನ ದಿನಾಂಕ 07-10-2015 ರ ಬೆಳಿಗ್ಗೆ ಬಸ್ಸಿನಲ್ಲಿ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ತಲುಪಿದೆವು. ಅಲ್ಲಿ ಬಸ್ಸಿನ ಪ್ರಯಾಣಿಕರೆಲ್ಲರ ವಿವರ ನೀಡಿ 'ದೇವಭೂಮಿ' ಪ್ರವೇಶಕ್ಕೆ ಅನುಮತಿ ಪಡೆದು ತಂದರು. ದೇವಭೂಮಿಯು ಅತ್ಯಂತ ಕಡಿದಾದ ಹಿಮಾಲಯ ಪರ್ವತ ಪ್ರದೇಶವಾಗಿದ್ದು, ಹವಾಮಾನ ವೈಪರೀತ್ಯಗಳು ಹಾಗೂ ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯವಿದೆ. ಹಾಗಾಗಿ ಈ ಅನುಮತಿ ಪತ್ರ ಅವಶ್ಯಕವಾಗಿದೆ. ನಮ್ಮ ಚಾರ್ ಧಾಮ್ ಯಾತ್ರೆ - ಯಮುನೋತ್ರಿ, ಗಂಗೋತ್ರಿ, ಕೇದಾರ, ಬದರಿ, ಇವು ದೇವಭೂಮಿಯಲ್ಲೇ ಸಾಗುತ್ತದೆ. ನಾವು ಅಲ್ಲಿಂದ ಮುಸ್ಸೋರಿಗಾಗಿ ಕೆಂಪ್ಟಿ ಫಾಲ್ಸ್ ತಲುಪಿದೆವು. ಅಲ್ಲಿನ ತಂಪು ಹವೆ, ಜಲಪಾತಗಳು ರಮಣೀಯವಾಗಿವೆ. ಅಲ್ಲೊಂದು ರೋಪ್ ವೇ ಸ್ವಲ್ಪ ದುಬಾರಿಯಾಗಿದೆ. ಅಲ್ಲಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ 123 (507) ರಲ್ಲಿ ಅತ್ಯಂತ ಅಗಲ-ಕಿರಿದಾದ, ಸುತ್ತಿ ಬಳಸಿ ಸಾಗುವ ರಸ್ತೆಯಲ್ಲಿ ಸಾಗಿದೆವು. ನಮ್ಮ ಎಡಬದಿಗೆ ಯಮುನಾ ನದಿ ಪ್ರಪಾತವನ್ನೇ ಸೃಷ್ಟಿಸಿತ್ತು. ಹವಾಮಾನ ಹಿತಕರವಾಗಿತ್ತು. ಎತ್ತರವಾದ ಗಿರಿಶಿಖರಗಳ ಸಾಲು ಸಾಲೇ ನಮ್ಮೆದುರಿಗೆ ಕಾಣಬಂದು ಸೃಷ್ಟಿಯ ವಿರಾಜದರ್ಶನವಾಯಿತು. ತೆಹ್ರಿ ಘರವಾಲ್, ನಯಾಗಾಂವ್ ಮಾರ್ಗವಾಗಿ ಸಂಜೆ ಬಾರ್ ಕೋಟ್ (ಬಡಾ ಕೋಟ್) ತಲುಪಿ ಹೋಟೆಲ್ ಚೌಹಾನ್ ಎನೆಕ್ಸ್ ನಲ್ಲಿ ತಂಗಿದೆವು. ಹರಿದ್ವಾರದಿಂದ ಡೆಹ್ರಾಡೂನ್ ವರೇಗೆ ದಟ್ಟ ಅರಣ್ಯವಿದೆ. ಎತ್ತರವಾದ ಮರಗಳಿವೆ. ಮುಂದುವರಿದಂತೆ ಕಾಡು ಸರಿದು ಸಣ್ಣ ಮರಗಳು, ಬೋಳು ಬೆಟ್ಟಗಳು. ಎತ್ತರಕ್ಕೆ ಏರಿದಂತೆಲ್ಲಾ ದೇವದಾರು ಜಾತಿಯ ಸೂಜಿಮೊನೆ ಕಾಡುಗಳು ಎಲ್ಲೆಡೆ ಬೆಳೆದು ನಿಂತಿವೆ. ಉಷ್ಣಹವೆ ಕಳೆದು ತಂಪಾದ ಹವೆ ವ್ಯಾಪಿಸಿದೆ. ಕಣಿವೆ, ಕಣಿವೆಗಳಲ್ಲೂ ಅಸಂಖ್ಯ ಜಲಪಾತಗಳು ನಯನ ಮನೋಹರವಾಗಿದೆ. ದೇವಭೂಮಿಯಲ್ಲೆಲ್ಲಾ ದೇವಮಂದಿರಗಳೂ, ಒಂದೊಂದು ಪುರಾಣ ಕತೆಗಳೂ ಪ್ರಚಲಿತವಾಗಿದೆ.

ನಮ್ಮ ಯಾತ್ರೆಯ 7ನೇ ದಿನ ತಾ 08-10-2015 ರ ಬೆಳಗಿನ ಜಾವ ಬಾರ್ ಕೋಟ್ ನಿಂದ ಯಮುನಾ ನದೀ ತೀರದಲ್ಲೇ ಯಾತ್ರೆ ಹೊರಟು ಕಿಸಾವ, ಸಾಯನಚಟ್ಟಿ, ಹನುಮಾನ್ ಚಟ್ಟಿಗಾಗಿ ಜಾನಕಿಚಟ್ಟಿ ವರೇಗೆ ಬಸ್ಸಿನಲ್ಲಿ ತಲುಪಿದೆವು. ಹರಿದ್ವಾರದಿಂದ ಬಾರ್ ಕೋಟ್ ನ ದೂರ 129 ಕಿ.ಮೀ. ಬಾರ್ ಕೋಟ್ ನಿಂದ ಜಾನಕಿಚಟ್ಟಿಗೆ 41 ಕಿ.ಮೀ. ದೂರವಿದೆ. ಮುಂದೆ ಕಾಲ್ನಡಿಗೆ, ಕುದುರೆ (ಪೋನಿ) ಅಥವಾ ಡೋಲಿಯಲ್ಲಿ ಸಾಕುವ ಏರುದಾರಿಯ ದೂರ 5. ಕಿ.ಮೀ. ಯಮುನೋತ್ರಿಗೆ. ಈ ಏರುದಾರಿ ಮೆಟ್ಟಿಲುಗಳಿಂದ ಕೂಡಿದ್ದು ಕಡಿದಾದ, ತ್ರಾಸದಾಯಕವಾದ ದಾರಿ. ಇಕ್ಕೆಲಗಳ ದೃಶ್ಯ ಅದ್ಭುತ. ಜಾನಕಿಚಟ್ಟಿಯಿಂದ ಉಪಹಾರ ಮುಗಿಸಿ ಕುದುರೆಯೇರಿ (08:30) ಸುಮಾರು 11 ಗಂಟೆಗೆ ಯಮುನೋತ್ರಿ ತಲುಪಿದೆವು. ಹಲವು ಕಣಿವೆಗಳು, ಜಲಪಾತಗಳು, ಹಿಮಾಚ್ಛಾದಿತ ಪರ್ವತ ಶಿಖರಗಳು ಕಾಣಸಿಗುತ್ತವೆ. ಹವೆ ತಂಪಾಗಿತ್ತು. ಯಮುನೋತ್ರಿಯಲ್ಲಿ ಯಮುನಾ ದೇವಿ ಮಂದಿರವಿದೆ. ಯಮುನೆ ಯಮನ ತಂಗಿಯೆಂದೂ, ಸೂರ್ಯನ ಮಗಳೆಂದೂ ಪುರಾಣಕತೆಗಳಿವೆ. ಗಂಗಾ, ಯಮುನಾ ಮೂರ್ತಿಗಳ ಮಧ್ಯೆ ಲಕ್ಷ್ಮೀ ದೇವಿಯ ಪ್ರತಿಮೆಯ ಇದೆ. ಹನುಮಾನ್ ಮಂದಿರವೂ ಬಲಬದಿಗೆ ಇದೆ. ಬಿಸಿನೀರಿನ ಚಿಲುಮೆ ಅನ್ನ, ಬೇಳೆ ಬೇಯಿಸುವಷ್ಟು ಬಿಸಿಯಾಗಿದೆ. ಜನ ಬೇಳೆ ಬೇಯಿಸುತ್ತಲೂ ಇದ್ದರು. ಅಲ್ಲಿಂದ ಹರಿದ ಬಿಸಿನೀರು ಕೊಳ ಸೇರಿದಾಗ ಅದು ಸ್ನಾನಕ್ಕೆ ಹದವಾಗಿರುತ್ತದೆ. ಅಲ್ಲೇ ಕೆಳಗೆ ಹರಿಯುವ ಯಮುನೆಯ ನೀರು ಹಿಮಕರಗಿದ ತಂಪಾದ ನೀರಾಗಿದೆ. ಅಲ್ಲಿಂದ ಕಾಣುವ ಶಿಖರದಲ್ಲಿ ಹಿಮ ಕರಗಿ ಬರುವ ನದಿಯೇ ಯಮುನೆ. ಯಮುನೋತ್ರಿ ಸಮುದ್ರಮಟ್ಟದಿಂದ 3168 ಮೀಟರ್ (10460 ಅಡಿ) ಎತ್ತರದಲ್ಲಿದೆ. ನಮ್ಮ ಯಾತ್ರಾರ್ಥಿಗಳು ಸ್ನಾನ, ಅರ್ಚನೆ, ಸೇವೆ ಮಾಡಿಸಿ, 5. ಕಿ.ಮೀ. ಶಿಖರವಿಳಿದು ಜಾನಕಿಚಟ್ಟಿಗೆ ಹಿಂದಿರುಗಿ ಬಂದು ಊಟ ಮುಗಿಸಿದೆವು. ಅಲ್ಲಿಂದ ಮರಳಿ ಬಾರ್ ಕೋಟ್ ತಲುಪಿದಾಗ ಸಂಜೆಯಾಗಿತ್ತು. ಮನದಲ್ಲಿ ಮಾಸದ ಸುಂದರ ದೃಶ್ಯಗಳು ತುಂಬಿದ್ದವು. ಕ್ಯಾಮೆರಾ, ಮೊಬೈಲುಗಳಲ್ಲಿ ಸೆರೆಹಿಡಿದ ದೃಶ್ಯಗಳು ತುಂಬಿದ್ದವು. ಸಂಜೆ ಬಾರ್ ಕೋಟ್ ಪೇಟೆ ಸುತ್ತಾಡಿ ಹೋಟೆಲಿನಲ್ಲಿ ವಿಶ್ರಾಂತಿ ಪಡೆದೆವು. ಯಮುನೋತ್ರಿ ಮಂದಿರ ಚಳಿಗಾಲದ 6 ತಿಂಗಳು ಮುಚ್ಚಲಾಗಿ ಜಾನಕಿಚಟ್ಟಿಯಲ್ಲಿ ಪೂಜೆ ನಡೆಯುತ್ತದೆ.

ತಾರೀಕು 09-10-2015 ರಂದು ಬಾರ್ ಕೋಟ್ ನಿಂದ ನಮ್ಮ ಪ್ರಯಾಣ ಉತ್ತರಕಾಶಿಗೆ. ಬೆಳಿಗ್ಗೆ 07:30 ಕ್ಕೆ ಹೊರಟು ದುಂಡಾ, ದಾಸರು ಮಾರ್ಗವಾಗಿ ಆರಾಮದಿಂದ ಮಧ್ಯಾಹ್ನ ಉತ್ತರಕಾಶಿ ತಲುಪಿದೆವು. ರಸ್ತೆಯ ಎರಡೂ ಬದಿಗೆ ಎತ್ತರವಾದ ದೇವದಾರು ಮರಗಳು ಬೆಳೆದಿದ್ದವು. ಈ ಪ್ರಯಾಣದ ದೂರ ಸುಮಾರು 85 ಕಿ.ಮೀ.ಗಳು. ರಸ್ತೆಯೂ ಚೆನಾಗಿತ್ತು. ಇಸ್ವಿ 2013 ರಲ್ಲಾದ ಜಲಪ್ರಳಯದಲ್ಲಿ ಉತ್ತರಕಾಶಿಯಲ್ಲಿ ಭಾಗೀರಥೀ ನದಿಯ ಬದಿಗೇ ಇದ್ದು ಕೊಚ್ಚಿ ಹೋದ 'ಆಕಾಶ ಗಂಗಾ' ಎಂಬ ಹೋಟೆಲಿನ ಮರುಸ್ಥಾಪನೆ 5 ಕಿ.ಮೀ. ದೂರದಲ್ಲಗಿತ್ತು. ನಾವು ಅದೇ ಹೋಟೆಲಿನಲ್ಲಿ ತಂಗಿದೆವು. ಹೋಟೆಲಿನ ಮಗ್ಗುಲಿಗೆ ಹತ್ತಾರು ಪೇರಳೆ ಮರಗಳು ಹಣ್ಣುಗಳಿಂದ ತುಂಬಿದ್ದವು. ಹೋಟೆಲಿನವರ ಅನುಮತಿ ಮೇರೆಗೆ ನಮ್ಮ ಯಾತ್ರಾರ್ಥಿಗಳಿಗೆ ಸಾಕಷ್ಟು ಹಣ್ಣು ಲಭಿಸಿದವು. ಅಲ್ಲಿ ಊಟ ಮುಗಿಸಿ ಉತ್ತರಕಾಶಿ ನಗರದಲ್ಲಿರುವ ಪ್ರಾಚೀನ 'ಕಾಶಿ ವಿಶ್ವನಾಥ ಮಂದಿರ' ಸಂದರ್ಶಿಸಿದೆವು. ಕಾಶಿಯಂತೆ ಇಲ್ಲೂ ಶಿವನ ಕೃಷ್ಣಶಿಲಾ ಲಿಂಗವಿದೆ. ನಾವೇ ಅರ್ಚನೆ, ಪೂಜೆ ಮಾಡಬಹುದಾಗಿದೆ. ನಾವು ಪೂಜಿಸಿ ಹೊರ ಪ್ರಾಂಗಣದಲ್ಲಿದ್ದ ಗುಡಿಗಳನ್ನು ವೀಕ್ಷಿಸಿದೆವು. ಪ್ರಾಚೀನ ದೇವಾಲಯವಾಗಿದ್ದುದರಿಂದ ಗುಡಿಗಳ ಜೀರ್ಣೋದ್ಧಾರ, ದುರಸ್ತಿ ಕಾರ್ಯ ನಡೆಯುತ್ತಿತ್ತು. ಉತ್ತರಕಾಶಿ ನಗರದ ಮಧ್ಯೆ ಭಾಗೀರಥೀ ನದಿ ಹರಿಯುತ್ತಿದ್ದು ಇದಕ್ಕೆ ಅಣೆಕಟ್ಟೆ ಕಟ್ಟಿ ಜಲವಿದ್ಯುತ್ ಉತ್ಪಾದಿಸುತ್ತಾರೆ. ಅಲ್ಲದೆ ಒಂದು ಸುರಂಗ ಮಾರ್ಗ ಮಾಡಿ ರಸ್ತೆ ಮಾಡಿರುತ್ತಾರೆ. ಸಂಜೆ ಪುನಃ ಹೋಟೆಲ್ 'ಆಕಾಶ ಗಂಗಾ'ದಲ್ಲಿ ವಿಶ್ರಾಂತಿ ಪಡೆದೆವು.

ದಿನಾಂಕ 10-10-2015 ರ ಶನಿವಾರ ಬೆಳಿಗ್ಗೆ ಉತ್ತರಕಾಶಿಯಿಂದ 5 ಗಂಟೆಗೇ ಹೊರಟು ಬತ್ವಾರಿ, ಗಂಗಾನಾನಿ, ಚೋಲ್ಮಿ, ಪುರ್ಗಾ, ಭೈರೋನ್ ಘಾಟ್ ಮಾರ್ಗವಾಗಿ ಸುಮಾರು 100 ಕಿ.ಮೀ. ದೂರದ ಗಂಗೋತ್ರಿಗೆ ಬೆಳಗಿನ 10 ಗಂಟೆಗೆ ತಲುಪಿದೆವು. ನಮ್ಮ ಪ್ರಯಾಣದ ರಸ್ತೆ ಬಹಳ ಅಗಲಕಿರಿದಾಗಿ, ತಿರುವುಗಳಿಂದ ಕೂಡಿತ್ತು. ಹಿಮಾಚ್ಛಾದಿತ ಗಿರಿ ಶಿಖರಗಳು, ಆಳ ಕಣಿವೆಗಳು, ಜಲಪಾತಗಳು, ಅಗಾಧ ಕಲ್ಲು ಬಂಡೆಗಳು ವಿಸ್ಮಯ ಹುಟ್ಟಿಸುತ್ತವೆ. ಹವೆ ಚಳಿಯಾಗಿತ್ತು. ಭಾಗೀರಥೀ ನದಿಗೆ ಅಣೆಕಟ್ಟೆ ಕಟ್ಟಿ ವಿದ್ಯುತ್ ಉತ್ಪಾದನಾ ಘಟಕಗಳಿವೆ. ಆ ಶಿಖರಗಳಲ್ಲೂ ನೆಲಗಡಲೆ, ಸೇಬು ಮರಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಭಾರತೀಯ ಸೈನ್ಯದ ತುಕಡಿಗಳು ಕಾರ್ಯ ನಿರತವಾಗಿವೆ. ಗಂಗೋತ್ರಿಯಲ್ಲಿ ಭಾಗೀರಥೀ ನದಿ ಹರಿಯುತ್ತದೆ. ಹಿಮ ಕರಗಿ ಆಗ ತಾನೇ ನೀರಾದ ನದಿ ಬಹಳ ತಂಪಾಗಿತ್ತು. ಅಲ್ಲಿ ಸ್ನಾನ ಮಾಡಿ ಪುರೋಹಿತರಿಂದ ಸಂಕಲ್ಪ ಸ್ನಾನ, ಪಿತ್ರತಿಲತರ್ಪಣ ಕೊಟ್ಟು ಆಶೀರ್ವಚನ ಪಡೆದೆವು. ಅವರಿಗೆ ದಕ್ಷಿಣೆ ಕೊಟ್ಟು; ಭಾಗೀರಥೀ ಮಂದಿರ ದರ್ಶನವಾಯಿತು. ಭೈರವ, ಹನುಮಾನ್ ಗುಡಿಗಳ ದರ್ಶನವೂ ಆಯಿತು. ಅಲ್ಲಿಂದ ಗಂಗೋತ್ರಿ ಶಿಖರಗಳು ಬಿಸಿಲಿಗೆ ಸ್ಫಟಿಕದಂತೆ ಹೊಳೆಯುವ ದೃಶ್ಯ ಅಮೋಘವಾಗಿತ್ತು. ಸಾಕಷ್ಟು ಫೋಟೋ ತೆಗೆದುಕೊಂಡೆವು. ಗಂಗೋತ್ರಿಯಲ್ಲಿ ಸಾಲು ಸಾಲು ಅಂಗಡಿಗಳು ಜನಾಕರ್ಷಣೆಯ ತಾಣಗಳಾಗಿವೆ. ಗಂಗೊತ್ರಿಯಿಂದ ಭಾಗೀರಥಿಯ ಉಗಮ ಸ್ಥಾನವಾದ ಗೊಮುಖಕ್ಕೆ 18 ಕಿ.ಮೀ. ದೂರವಿದೆ. ಅಲ್ಲಿಗೆ ಟ್ರೆಕ್ಕಿಂಗ್ ವ್ಯವಸ್ಥೆ ಮಾತ್ರ ಇದೆ. ನಾವು ಗಂಗೊತ್ರಿಯಿಂದ ಭಾಗೀರಥಿಯ ಇಕ್ಕೆಲಗಳಲ್ಲೂ ಸಂಚರಿಸುತ್ತಾ ನದೀ ಪಾತ್ರದ ಭವ್ಯ ಕನಣಿವೆಗಳನ್ನೂ, ಹಿಮಾವೃತವಾದ ಗಿರಿ ಶಿಖರಗಳನ್ನೂ, ಹಾವಿನಂತೆ ಸಾಗುವ ಸುತ್ತು ಬಳಸಿನ ರಸ್ತೆಗಳನ್ನೂ ನೋಡುತ್ತಾ ಹಿಂದಿರುಗಿದೆವು. ಅಲ್ಲಲ್ಲಿ ತುಂಬಿ ತುಳುಕುವ ಸೇಬಿನ ಮರಗಳನ್ನು ಕಂಡು ಹಿಗ್ಗಿದೆವು. ಚಾರ್ ಧಾಮ್ ಯಾತ್ರೆಯ 2ನೇ ಧಾಮವನ್ನು ನೋಡಿ ಹಿಂದಿರುಗಿದ ನಾವು ಸುಮಾರು 7 ಗಂಟೆಗೆ ಉತ್ತರಕಾಶಿಯ 'ಆಕಾಶ ಗಂಗಾ' ಹೋಟೆಲ್ ತಲುಪಿ ವಿಶ್ರಾಂತಿ ಪಡೆದೆವು.

ಯಾತ್ರೆಯ 10 ನೇ ದಿನ, ಬೆಳಿಗ್ಗೆ 11-10-2015 ರ 7 ಗಂಟೆಗೆ ಉತ್ತರಕಾಶಿಯಿಂದ ಹೊರಟ ನಾವು ಉತ್ತರಾಖಂಡದ ಶ್ರೀನಗರದತ್ತ ಸಾಗಿದೆವು. ಕಡಿದಾದ ಕಣಿವೆಗಳನ್ನು ಸುತ್ತುಬಳಸಿ ರಾಜ ರಸ್ತೆ ಸಾಗುತ್ತಿತ್ತು. ಭಾಗೀರಥೀ ನದಿಗೆ ಜಲವಿದ್ಯುತ್ ನಿರ್ಮಿಸಲು ಕಟ್ಟಿದ ಚಿಕ್ಕ ಅಣೆಕಟ್ಟೆ ಕಾಣಸಿಕ್ಕಿತು. ಅನತಿ ದೂರದಲ್ಲಿ ಪುನಃ ಭಾಗೀರಥೀ ನದಿಯಲ್ಲಿ ತುಂಬಿದ್ದ ನೀರು ಕಂಡಿತು. ಇದು ತೆಹ್ರೀ ಅಣೆಕಟ್ಟೆಯ ಹಿನ್ನೀರೆಂದು ತಿಳಿಯಿತು. ಉತ್ತರಾಖಂಡದ ಭೂಪಟದಲ್ಲಿ ಉತ್ತರಕಾಶಿಯಿಂದ ಶ್ರೀನಗರಕ್ಕೆ 130 ಕಿ.ಮೀ. ದೂರ ಎಂದಿದೆ. ಆದರೆ ಈಗಿನ ತೆಹ್ರೀ ಅಣೆಕಟ್ಟೆ ಪ್ರಪಂಚದ ಎತ್ತರದ ಅಣೆಕಟ್ಟೆಗಳಲ್ಲೊಂದು ಎಂಬ ಫಲಕವಿದೆ. ಅಲ್ಲಿ ನಾನು ಕಂಡ ನೀರಿನ ಮತ್ತ ೮೨೦ ಅಡಿ ಎಂದಿದೆ. ನಮ್ಮ ರಸ್ತೆ ಬಹಳಷ್ಟು ಕಣಿವೆಗಳನ್ನು ಸುತ್ತಿ ಸಾಗುವುದರಿಂದ ಈಗಿನ ದೂರ ಶ್ರೀನಗರಕ್ಕೆ 240 ಕಿ.ಮೀ. ಎನ್ನುತ್ತಾರೆ. ನಾವು 'ಚಂಬಾ' ಎಂಬ ಊರು ದಾಟಿ ಕೆಲವು ಮೈಲು ದೂರದಲ್ಲಿ ತೆಹ್ರೀ ಅಣೆಕಟ್ಟೆ ಇದೆ. ನಮ್ಮ ರಸ್ತೆ ಅದರ ಮೇಲೇ ಸಾಗುತ್ತದೆ. ಅಣೆಕಟ್ಟೆಯ ಕೆಳಭಾಗದಲ್ಲಿ ಬಹು ದೂರದ ವರೇಗೆ ಭದ್ರವಾದ ತಡೆಗೋಡೆ ನಿರ್ಮಿಸಿರುತಾರೆ. ಆ ನದಿ, ಅಣೆಕಟ್ಟೆ ದಾಟಿ ಇನ್ನೊಂದು ಉಪನದಿಯ ದಂಡೆಯಲ್ಲೇ ಸಾಗಿದೆವು. ಅಲ್ಲಲ್ಲಿ ಆ ನದಿಗೆ ತೂಗುಸೆತುವೆಗಳನ್ನೂ ಕಂಡೆವು. ಸಂಜೆಯ ವೇಳೆಗೆ ಶ್ರೀನಗರ ತಲುಪಿ ಅಲಕಾನಂದ ನದಿ ದಾಟಿ, 3 ಕಿ.ಮೀ. ದೂರದ ಶ್ರೀ ಕೋಟ್ ಎಂಬಲ್ಲಿಗೆ ತಲುಪಿ ಶ್ರೀ ಕೊಟ್ ಕಾಸೆಲ್ ಎಂಬ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದೆವು. ಅಲ್ಲಿ ಅಲಕಾನಂದ ನದಿ ಬಹಳ ಹರಿವಿನಿಂದ ಕೂಡಿದೆ. ಸಂಜೆ ಹೋಟೆಲಿನಿಂದ ನದೀ ಪಾತ್ರಕ್ಕೆ ನಡೆದು ಜಲಪ್ರೋಕ್ಷಣೆ ಮಾಡಿದೆವು. ಅಲ್ಲೇ ದಂಡೆಯ ಮೇಲಿದ್ದ ಶಿವ ದೇವಸ್ಥಾನದಲ್ಲಿ ಸಂಜೆಯ ಆರತಿಯಲ್ಲಿ ಪಾಲ್ಗೊಂಡು ಪ್ರಸಾದ ಪಡೆದು ಹಿಂದಿರುಗಿದೆವು. ಶಿವಾಲಯ ಸುಂದರವಾಗಿತ್ತು. ಸಂಜೆ ಭಜನೆಯೂ ನಡೆಯುತ್ತಿತ್ತು.

ಯಾತ್ರೆಯ 11ನೇ ದಿನ ದಿನಾಂಕ 12-10-2015 ರ ಬೆಳಿಗ್ಗೆ 8 ಗಂಟೆಗೆ ಶ್ರೀನಗರದಿಂದ ಕೇದಾರ ದತ್ತ ನಮ್ಮ ಪ್ರಯಾಣ ಸಾಗಿತು. ಶ್ರೀ ಕೊಟ್ ನಿಂದ ಅಲಕಾನಂದ ನದಿ ತೀರದಲ್ಲೇ ಸಾಗಿದೆವು. ಅಲ್ಲೂ ಒಂದು ಜಲವಿದ್ಯುತ್ ಅಣೆಕಟ್ಟೆ ನೋಡಿದೆವು. ಅಲ್ಲಲ್ಲಿ ತೂಗು ಸೇತುವೆಗಳು, ರೋಪ್ ವೇಗಳು ಕಂಡುಬಂದವು. ಸುಮಾರು 9 ಗಂಟೆಗೆ ಜಿಲ್ಲಾ ಕೇಂದ್ರವಾದ ರುದ್ರಪ್ರಯಾಗ ತಲುಪಿದೆವು. ಅಗಲಕಿರಿದಾದ ರಸ್ತೆಯಲ್ಲಿ ಸಾಗಿ, ರುದ್ರಪ್ರಯಾಗದ ಸಂಗಮ ಸ್ಥಳ ತಲುಪಿದೆವು. ಕೇದಾರದಿಂದ ಬರುವ ಮಂದಾಕಿನಿ ನದಿ ಹಾಗೂ ಬದರಿಯಿಂದ ಬರುವ ಅಲಕಾನಂದ ನದಿಗಳ ಸಂಗಮವೇ ರುದ್ರಪ್ರಯಾಗ. ಅಲ್ಲೇ ನಾರದ ಮುನಿ ತಪಸ್ಸು ಮಾಡಿದ ಸ್ಥಳವಿದೆ, ಗುಡಿ ಇದೆ, ವಟವೃಕ್ಷವಿದೆ, ಶಿವಾಲಯವೂ ಇದೆ. 'ಪ್ರಯಾಗ' ಎಂದರೆ ನದಿಗಳ ಸಂಗಮ. ಅಲ್ಲಿಳಿದು ಸ್ನಾನ ಮಾಡಿದೆವು. ಪ್ರೋಕ್ಷಣೆಯೂ ಸ್ನಾನವೆಂದೇ ಪರಿಗಣಿಸಲ್ಪಡುತ್ತದೆ. ಕೆಲವರು ಸ್ನಾನ, ತರ್ಪಣ ನೀಡಿದರು. ಬಹಳ ಹೊತ್ತು ಬಲ್ಲವರು ಮಂತ್ರ ಪಠಿಸಿದರು. ಮುಂದೆ ನಾವೆಲ್ಲಾ ಬಸ್ಸನ್ನೇರಿ ಮಂದಾಕಿನಿ ನದೀ ದಡದಲ್ಲೇ ಮುಂದೆ ಸಾಗಿದೆವು. ಮೊದಲಿಗೆ ಮಂದಾಕಿನಿ ಅಗಲಕಿರಿದಾದ ನದಿಯಾಗಿ ಕಾಣಿಸಿ ಮುಂದುವರಿದಂತೆ ತನ್ನ ವಿರಾಟ ರೂಪ ದರ್ಶನ ಮಾಡಿಸಿತು. 2013 ರ ಜಲಪ್ರಳಯದ ನೆನಪಾಗಿ ಕೆಲವು JCB ತುಣುಕುಗಳು, ಲಾರಿಯ, ಕಾರಿನ ಅವಶೇಷಗಳೂ ಕಾಣಸಿಕ್ಕಿದವು. ಮುಂದೆ ನವಪಾದ, ಅಗಸ್ತ್ಯಮುನಿ ವರೇಗೆ ಎಡಭಾಗದಲ್ಲಿದ್ದ ನದೀ ದಾಟಿ ಬಲಭಾಗದಲ್ಲಿ ಪ್ರಪಾತ ನೋಡುತ್ತಾ ರಸ್ತೆ ಏರುತ್ತಾ ಸಾಗಿತು. ಗುಪ್ತಕಾಶಿ ಎಂಬ ಪೇಟೆ ದಾಟಿ ಸುಮಾರು ಮಧ್ಯಾಹ್ನ 01:30 ಕ್ಕೆ 'ಸೀತಾಪುರ' ತಲುಪಿ ಹೋಟೆಲ್ 'ಅನ್ನಪೂರ್ಣಾ' ದಲ್ಲಿ ವಾಸ್ತವ್ಯ ಹೂಡಿದೆವು. ಮಧ್ಯಾಹ್ನದ ಊಟದ ನಂತರ ಬಾಡಿಗೆ ಜೀಪುಗಳಲ್ಲಿ ನಮ್ಮದೇ ಖರ್ಚಿನಲ್ಲಿ ಸುಮಾರು 15 ಕಿ.ಮೀ. ದೂರದ 'ತ್ರಿಯೋಗಿ ನಾರಾಯಣ್' ಎಂಬ ಪ್ರಾಚೀನ ದೇವಾಲಯ ಸಂಕೀರ್ಣ ತಲುಪಿದೆವು. ಅಲ್ಲಿನ ಪ್ರಕಾರದಲ್ಲಿ ಬ್ರಹ್ಮಕುಂಡ, ಶಿವಕುಂಡ, ನಾರಾಯಣಕುಂಡ, ಸರಸ್ವತೀಕುಂಡಗಳೆಂಬ 4 ನೀರಿನ ಚಿಲುಮೆಗಳಿವೆ. ಅಲ್ಲೇ ಶಿವಪಾರ್ವತಿಯವರ ವಿವಾಹ ಜರಗಿದ ಮಂಟಪವಿದೆಂದು ತೋರಿಸುತ್ತಾರೆ. ನಾವು ಅಲ್ಲಿ ಪುರೋಹಿತರ ಜೊತೆ ಸಂಕಲ್ಪ ಮಾಡಿ ಪ್ರಾರ್ಥಿಸಿದೆವು. ಇಷ್ಟಾರ್ಥ ಸಿದ್ಧಿಸುವುದೆಂದರು. ಅಲ್ಲೇ ಶಿವಪಾರ್ವತಿಯವರ ವಿವಾಹಕ್ಕೆ ಸಾಕ್ಷಿಯಾದ ಶ್ರೀಮನ್ ನಾರಾಯಣನ ಮಂದಿರವಿದೆ. ಬೆಳ್ಳಿ ಬಂಗಾರದ ಹೊದಿಕೆಯ ಹಲವು ಪ್ರತಿಮೆಗಳು ಆಕರ್ಷಣೀಯವಾಗಿವೆ. ಅಲ್ಲಿ ಯಜ್ಞಕುಂಡವೊಂದು ನಿರಂತರವಾಗಿ ಉರಿಯುತ್ತಲೇ ಇದೆ. ಯಾತ್ರಾರ್ಥಿಗಳಿಂದ ಭತ್ತ, ಹೂ ಇತ್ಯಾದಿಗಳ ಜೊತೆ ಕಟ್ಟಿಗೆ ತುಂಡುಗಳನ್ನು ಸಮರ್ಪಿಸಲಾಗುತ್ತದೆ. ಪ್ರಶಾಂತ ವಾತಾವರಣದಲ್ಲಿರುವ ಈ ದೇವಾಲಯವು ಮನಃ ಶಾಂತಿ ನೀಡುವಂತಿದೆ. ಪುರೋಹಿತರ ತಂಡವೂ ಸೌಮ್ಯವಾಗಿ ಸಹಕರಿಸಿದರು. ಮಾರ್ಗದರ್ಶನ ಮಾಡಿದರು. ಅಲ್ಲಿಂದ ಹಿಂದಿರುಗಿ ಬರುವಾಗ ಗಣಪತಿಯ ತಲೆ ಕಡಿದು ಆನೆಯ ತಲೆ ಜೋಡಿಸಿದ ಸ್ಥಳವೆಂದು ಒಂದು ಗುಡಿ ತೋರಿಸಿದರು. ಕಾಡಿನ ಮಧ್ಯೆ ಈ ಗುಡಿ ಗೋಚರಿಸುತ್ತದೆ. 2 ವರ್ಷಗಳ ಹಿಂದೆ ಸುಮಾರು 150 ವಾಹನಗಳು ನಿಂತಿದ್ದು ರಾತ್ರಿಯ ವೇಳೆ ಕೊಚ್ಚಿ ಹೋದ ನದೀ ಪಾತ್ರ ತೋರಿಸಿದರು. ಅಲ್ಲಿ ನದೀ ಪಾತ್ರ ಬಹಳ ಅಗಲವಾಗಿದ್ದು ಮೇಲಿನ ಜಾಗದಲ್ಲಿ ಈಗಲೂ ವಾಹನಗಳ ಪಾರ್ಕಿಂಗ್ ಇದೆ. ನಾವು ತಂಗಿದ್ದ ಹೋಟೆಲಿನಿಂದ ಈ ಸ್ಥಳ ಕಾಣುತ್ತದೆ. ರಾತ್ರಿ ಚಳಿಚಳಿಯಾದ ವಾತಾವರಣವಿತ್ತು.

ದಿನಾಂಕ 13-10-2015 ರ ಬೆಳಿಗ್ಗೆ 6  ಗಂಟೆಗೆ ಸೀತಾಪುರದ 'ಅನ್ನಪೂರ್ಣಾ' ಹೋಟೆಲಿನಿಂದ ಹೊರಟು 6 ಕಿ.ಮೀ. ದೂರದ 'ಹಿಮಾಲಯನ್ ಹೆಲಿ ಸರ್ವಿಸಸ್ ಪ್ರೈ.ಲಿ.' ಸಂಸ್ಥೆಯ ಹೆಲಿಪ್ಯಾಡಿಗೆ ತಲುಪಿದೆವು. ಜಲಪ್ರಳಯದಿಂದ ಹಾನಿಗೊಂಡು ಗೌರಿಕುಂಡದ ದಾರಿ ಮುಚ್ಚಿದ ಮೇಲೆ ಬಳಸುದಾರಿಯಾಗಿ ಕೇದಾರಕ್ಕೆ ಬೇರೆ ಕಾಲುದಾರಿ ಇರುವುದಾದರೂ, ತ್ರಾಸದಾಯಕವಾಗಿದ್ದು ಹೆಚ್ಚು ಸಮಯ ತಗಲುವುದರಿಂದ ಹಿರಿಯ ನಾಗರಿಕರಾದ ಯಾತ್ರಿಗಳಿಗೆ ಹೆಲಿಕಾಪ್ಟರ್ ಯಾತ್ರೆಯೇ ಸೂಕ್ತವೆಂದು ನಮ್ಮ ಮಾರ್ಗದರ್ಶಕರು ಸೂಚಿಸಿದ್ದರು. ಹಾಗಾಗಿ ನಾವು ನಮ್ಮ ಶರೀರದ ತೂಕ ಮಾಡಿಸಿ Boarding Pass ಪಡೆದು ಬೆಳಿಗ್ಗೆ 07:20 ಕ್ಕೆ ಹೆಲಿಕಾಪ್ಟರ್ ಏರಿದೆವು. 6 ಜನರಿಗೆ ಒಮ್ಮೆಗೆ ಅವಕಾಶವಿದೆ. 11 ನಿಮಿಷಗಳಲ್ಲಿ ಮೇಲೇರಿ ಸಾಗಿ ಕೇದಾರದ ಹೆಲಿಪ್ಯಾಡ್ ತಲುಪಿದೆವು. ಅಲ್ಲಿಂದ 550 ಮೀ. ನಡೆದು ದೇವಸ್ಥಾನ ತಲುಪಿದೆವು. 2013 ರ ಜಲಪ್ರಳಯದ ಎಲ್ಲ ಕುರುಹುಗಳು ಕಾಣಿಸಿದವು. ನೋಟ ಭೀಕರವಾಗಿತ್ತು. ಊಹೆಗೂ ನಿಲುಕದಂತೆ ಭಾರತೀಯ ಸೈನ್ಯ ಹಾಗೂ ಇತರ ಸಂಸ್ಥೆಗಳು ಪುನರ್ನಿರ್ಮಾಣ ಕಾರ್ಯ ನಡೆಸುತ್ತಲಿವೆ. ಹಲವು ಯಂತ್ರಗಳು ಕಾರ್ಯ ನಿರತವಾಗಿವೆ. ನಾವು ತಲುಪಿದ ಬೆಳಗಿನ ಹೊತ್ತು ಹಿತಕರವಾಗಿತ್ತು. ದೇವಸ್ಥಾನದ ಹಿಂದಿನ ಹಿಮಾಚ್ಛಾದಿತ ಶಿಖರಗಳು ಬೆಳ್ಳಿ ಬೆಡಗಿನಿಂದ ಹೊಳೆಯುತ್ತಿದ್ದವು. ಸುತ್ತಲಿನ ಬೆಟ್ಟಗಳ ನೋಟ ರುದ್ರರಮಣೀಯವಾಗಿತ್ತು. ಆದಿ ಶಂಕರಾಚಾರ್ಯರಿಂದ ಪ್ರಸಿದ್ಧಿ ಪಡೆದ ಪ್ರಾಚೀನ ದೇವಾಲಯ ಭವ್ಯವಾಗಿಯೂ ಭದ್ರವಾಗಿಯೂ ಇದೆ. ಕರ್ನಾಟಕದ 'ಮಹಂತ'ರೆಂಬ ಲಿಂಗಾಯತ ಅರ್ಚಕರು ನಮ್ಮನ್ನು ಹೂ, ಹಣ್ಣು ಪ್ರಸಾದಗಳ ತಟ್ಟೆಯೊಂದಿಗೆ ಕೇದಾರನಾಥ ದೇವಾಲಯದೊಳಗೆ ಕರೆದೊಯ್ದರು. ಪ್ರದಕ್ಷಿಣಾ ಪಥದಿಂದ ಸಾಗಿ ಮಧ್ಯೆ ಪೂಜಿಸಲ್ಪಡುವ ಎತ್ತಿನ ಭುಜದ ಆಕ್ರತಿಯಲ್ಲಿರುವ ಸುಮಾರು 3 ಅಡಿಗಳಷ್ಟು ಎತ್ತರದ ಶಿವಲಿಂಗವನ್ನು ಸ್ಪರ್ಶಿಸಿ ಹೂ, ಹಣ್ಣು, ತುಪ್ಪ, ಬಿಲ್ವಗಳನ್ನು ಅರ್ಪಿಸಿ ನೈವೇದ್ಯಕ್ಕೆ ಸಿಹಿ ಮಿಠಾಯಿ ಸಮರ್ಪಿಸಿದೆವು, ಸ್ತುತಿಸಿದೆವು. ಹಲವರು ರುದ್ರ ಪಠಣ ಮಾಡಿದರು. ದೇವಸ್ಥಾನದ ಗೋಡೆಗಳಲ್ಲಿ ಪಾಂಡವರ ಚಿತ್ರಗಳು ಕೆತ್ತಲ್ಪಟ್ಟಿವೆ. ದೇಗುಲದ (ಗೋಪುರದ) ಗರ್ಭಗೃಹ ಎತ್ತರವಾಗಿ ಶಿಲಾಮಯವಾಗಿದೆ. ನಂತರ ದೇವಸ್ಥಾನದ ಹೊರಭಾಗದಿಂದ ಪ್ರದಕ್ಷಿಣೆ ಬಂದೆವು. ಬಹಳ ಚಿಕ್ಕ ಜಲ ಕುಂಡವನ್ನು ದೇಗುಲದ ಹಿಂಭಾಗದಲ್ಲಿ ಕಂಡು, ಪ್ರೋಕ್ಷಿಸಿಕೊಂಡೆವು. ಅಲ್ಲೇ ಹತ್ತಿಪ್ಪತ್ತುಅಡಿ ದೂರದಲ್ಲಿ ದೊಡ್ಡ ಹೆಬ್ಬಂಡೆಯೊಂದು ಜಲಪ್ರಳಯದ ವೇಳೆ ತೇಲಿ ಬಂದು ನಿಂತಿತ್ತು.  ಅದರಿಂದಾಗಿ ದೇವಸ್ಥಾನಕ್ಕೆ ಹೆಚ್ಚಿನ ಅಪಾಯ ತಪ್ಪಿತೆಂದು ಜನ ಆಡಿಕೊಳ್ಳುತ್ತಾರೆ. ಆ ಬಂಡೆ ಕಲ್ಲಿಗೂ ಜನ ಕುಂಕುಮ, ಗಂಧ ತಳಿದು ಪೂಜಿಸುತ್ತಾರೆ. ದೇವಳದ ಹಿಂಭಾಗದಿಂದ ಬಂದ ನೀರು ತಂದ ಕಲ್ಲುಗಳು, ಸರಿದ ದಾರಿ, ಭಯಂಕರ ಕಲ್ಪನೆ ನೀಡುತ್ತವೆ. ಅಲ್ಲಿಂದ ಬರುತ್ತಾ ಸಾಕಷ್ಟು ಫೋಟೋ ತೆಗೆದುಕೊಂಡೆವು. ಅರ್ಚಕರಿಗೆ ದಕ್ಷಿಣೆ ಕೊಟ್ಟು ಪ್ರಸಾದ ಸ್ವೀಕರಿಸಿದೆವು. ಅಷ್ಟರಲ್ಲೇ ಬೆಳಗಿನ 10:30 ರ ವೇಳೆಗೆ ತಕ್ಷಣ ಹವೆ ಬದಲಾಯಿತು. ಬೆಟ್ಟದ ಮೇಲೆ ಭೈರವನ ಗುಡಿಯೊಂದಿದೆ. ಹಿಂದಿನ ಹಿಮಾಚ್ಛಾದಿತ ಶಿಖರಗಳು ಮಂಜಿನಿಂದ ಕಾಣದಾಗಿ ಚಳಿ ಆವರಿಸತೊಡಗಿತು. ಹೆಲಿಕಾಪ್ಟರ್ ಸೇವೆಗಳು ನಿಲ್ಲಿಸಲ್ಪಟ್ಟಿತ್ತು. ನಾವೆಲ್ಲ ಹೆಲಿಪ್ಯಾಡಿನ ಹಿಂದೆ ಇದ್ದ ಲಾಂಜಿನಲ್ಲಿ ಕುಳಿತು ವಿಶ್ರಾಂತಿ ಪಡೆದೆವು. ಚಳಿ ಸಹಿಸಿಕೊಂಡೆವು. ಇಂತಹ ಸಂದರ್ಭಗಳಲ್ಲಿ ದಿನವಿಡೀ ಉಳಿದುಕೊಳ್ಳಲು ಸುಮಾರು 1000 ಜನರು ತಂಗಬಲ್ಲ ಟೆಂಟುಗಳು ಹಾಗೂ ಕಟ್ಟಡಗಳೂ ಅಲ್ಲಿವೆ. ಸಾಕಷ್ಟು ಸಂಖ್ಯೆಯ ಶೌಚಾಲಯಗಳೂ ಇವೆ. ಭಾರತೀಯ ಸೈನ್ಯದವರ ಕ್ಯಾಂಟೀನಿನಲ್ಲಿ ಉತ್ತಮ ಊಟ, ಚಹಾ, ತಿಂಡಿಗಳ ವ್ಯವಸ್ಥೆಯೂ ಇದೆ. ನಾವು ಊಟ ಮಾಡಿ ಮುಗಿಸಿದೆವು. ಸುಮಾರು ಮಧ್ಯಾಹ್ನ 2 ಗಂಟೆಗೆ ಹಿಮದ ಬಿಳಿ ಹೊದಿಕೆ ಕರಗಿ ಸ್ವಲ್ಪ ಬಿಸಿಲಿನ ಅನುಭವವಾಯಿತು. ಮುಂದಿನ ಘಳಿಗೆಯೊಳಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಗೊಂಡು ನಾವೆಲ್ಲರೂ ಹಿಂದಿರುಗಿ, ಹೆಲಿಪ್ಯಾಡಿನಿಂದ ಇಳಿದು ಸೀತಾಪುರ ತಲುಪಿದೆವು. ಅಲ್ಲಿಂದ ಸೋನ್ ಪ್ರಯಾಗಕ್ಕೆ ಸುಮಾರು 4 ಕಿ.ಮೀ. ದೂರವಿದೆ. ಅಲ್ಲಿ ಉಚಿತವಾಗಿ, ಕಡ್ಡಾಯವಾಗಿ ಎಲ್ಲ ಯಾತ್ರಿಗಳ ದೈಹಿಕ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್/ ಅನುಮತಿ ಪತ್ರ ಪಡೆದ ಮೇಲೆ ಗೇಟಿನಲ್ಲಿ ತೋರಿಸಿ ಜೀಪುಗಳಲ್ಲಿ ಗೌರಿಕುಂಡಕ್ಕೆ ಪ್ರಯಾಣ ಮಾಡಿದೆವು. ಸುಮಾರು 5 ಕಿ.ಮೀ. ದೂರವಿದೆ. ರಸ್ತೆಯ ಬದಿಯಲ್ಲೇ ಮಂದಾಕಿನಿ ನದಿ ಹರಿಯುತ್ತದೆ. ಗೌರಿಕುಂಡದ ಸಮೀಪದಲ್ಲೊಂದು ಸುಂದರ ಜಲಪಾತವಿದೆ. ಗೌರೀಕುಂಡದ ಗೌರಿಯ ಗುಡಿ, ಗೌರಿಕುಂಡ ನೋಡಿದೆವು. 2013 ರಲ್ಲಿ ಈ ಗೌರಿಕುಂಡ ಸಂಪೂರ್ಣ ನಾಶವಾಗಿತ್ತು. ಎತ್ತರದಲ್ಲೇ ಇರುವ ಆ ಚಿಕ್ಕ ಪೇಟೆಯ ಹಲವು ಹೋಟೆಲ್ ಕಟ್ಟಡಗಳ ಕಾಂಕ್ರೀಟ್, ಕಬ್ಬಿಣದ ಸರಳಿನ ಅವಶೇಷಗಳು ಕಾಣಸಿಗುತ್ತವೆ. ಹಿಂದೆ ಇಲ್ಲೇ ತಂಗಿದ್ದು ಕಾಲುದಾರಿಯಲ್ಲಿ ಕೇದಾರಕ್ಕೆ ಹೋಗುತ್ತಿದ್ದರು. ಈಗ ಆ ತಾಣಗಳೆಲ್ಲ ನಾಶವಾಗಿದ್ದು ಮರು ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಸಂಜೆಯ ವೇಳೆಗೆ ಆ ಪ್ರಕೃತಿ ವಿಕೋಪದ ಸುಳಿವನ್ನು ನೋಡಿ, ಜೀಪುಗಳಲ್ಲಿ ಸೋನ್ ಪ್ರಯಾಗ, ಮುಂದೆ ಬಸ್ಸಿನಲ್ಲಿ ಸೀತಾಪುರ ತಲುಪಿ ಹೋಟೆಲಿನಲ್ಲಿ ವಿಶ್ರಾಂತಿ ಪಡೆದೆವು.

ದಿನಾಂಕ 14-10-2015 ರ ಬೆಳಿಗ್ಗೆ 7 ಗಂಟೆಗೆ ಸೀತಾಪುರದ ಹೋಟೆಲಿನಿಂದ ಹೊರಟು 08:30 ರ ವೇಳೆಗೆ ಗುಪ್ತಕಾಶಿ ತಲುಪಿದೆವು. ಅಲ್ಲಿಂದ ಸುಮಾರು 85 ಮೆಟ್ಟಿಲುಗಳನ್ನೇರಿ ಬೆಟ್ಟದ ಮೇಲೆ ಪ್ರಾಚೀನ ವಿಶ್ವನಾಥ ಮಂದಿರ ಸಂದರ್ಶಿಸಿದೆವು. ಮಂದಿರದ ಎದುರಿಗೆ ಗಂಗಾ, ಯಮುನಾ ಎಂಬ 2 ಜಲಧಾರೆಗಳು ಕಂಚಿನ ಗೋಪ್ರತಿಮೆಗಳ ಮುಖದಿಂದ ಪ್ರವಹಿಸುತ್ತದೆ. ಆ ಧಾರೆಗಳನ್ನು ತುಂಬಿ ಅಭಿಷೇಕ ಮಾಡುವ ಸಂಪ್ರದಾಯವಿದೆ. ಬಲಭಾಗದಲ್ಲಿ ಅರ್ಧನಾರೀಶ್ವರನ ಗುಡಿ ಇದೆ. ಪ್ರಾಂಗಣ ವಿಶಿಷ್ಟವಾಗಿದೆ. ಪುರಾಣದಂತೆ ಪಾಂಡವರು ಮಹಾಯುದ್ಧ ಮುಗಿದ ಬಳಿಕ ನರಹತ್ಯಾದೋಷ  ನಿವೃತ್ತಿಗಾಗಿ ಶಿವನನ್ನು ಅರಸುತ್ತಾ ಬಂದಾಗ ಗುಪ್ತಕಾಶಿಯಲ್ಲಿದ್ದ ಶಿವನು ಅಂತರ್ದಾನನಾಗಿ ಕೇದಾರಕ್ಕೆ ಬಂದನಂತೆ. ಪಾಂಡವರು ಕೇದಾರಕ್ಕೆ ಬಂದು ಎತ್ತಿನ ಭುಜದನ್ತಿರುವ ಲಿಂಗವನ್ನು ಅರ್ಚನೆ ಮಾಡಿ ಪಾಪಮುಕ್ತರಾದುದಂತೆ. ಅಲ್ಲಿಂದ ಬೆಟ್ಟ ಇಳಿದ ನಾವು ಬಸ್ಸಿನಲ್ಲಿ ಪ್ರಯಾಣ ಮುಂದುವರಿಸಿದೆವು. ಗುಪ್ತಕಾಶಿಯಿಂದ ನದಿ ದಾಟಿ ಚಮೋಲಿ ಎಂಬಲ್ಲಿಗೆ ನೇರ ರಸ್ತೆಯಿದೆ. ಆದರೆ ಚಾರ್ ಧಾಮ್ ಯಾತ್ರೆಗೆ ಸೂಚಿಸಿದ ನಿರ್ದಿಷ್ಟ ದಾರಿ ಅಲ್ಲಿಂದ (ಗುಪ್ತಕಾಶಿಯಿಂದ) ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ, ಜ್ಯೋತಿರ್ ಮಠ, ವಿಷ್ಣುಪ್ರಯಾಗಕ್ಕಾಗಿಯೇ ಬದರೀನಾಥಕ್ಕೆ ಸಾಗುತ್ತದೆ. ನಾವು ಅದೇ ದಾರಿಯಾಗಿ ರುದ್ರಪ್ರಯಾಗದಲ್ಲಿ ಮಂದಾಕಿನಿ ಅಲಕಾನಂದ ಸಂಗಮ, ಕರ್ಣಪ್ರಯಾಗದಲ್ಲಿ ಪಿಂಡಾರಿಗಂಗಾ ಅಲಕಾನಂದ ಸಂಗಮ, ನಂದಪ್ರಯಾಗದಲ್ಲಿ ನಂದಾಕಿನಿ ಅಲಕಾನಂದ ಸಂಗಮ, (ನಂದಾಕಿನಿ, ಮಂದಾಕಿನಿ ಬೇರೆ ಬೇರೆ) ಜ್ಯೋತಿ ಮಠದ ಸಮೀಪದಲ್ಲಿ ಬದರೀನಾಥ ದೇವರು 6 ತಿಂಗಳ ಚಳಿಗಾಲ ಪೂಜಿಸಲ್ಪಡುವ ಜಾಗ, ವಿಷ್ಣುಪ್ರಯಾಗದಲ್ಲಿ ಧೌಳಿಗಂಗಾ ಅಲಕಾನಂದ ಸಂಗಮವಾಗುತ್ತದೆ, ಇವುಗಳಲ್ಲಿ ಸ್ನಾನ ಇಲ್ಲವೇ ಧ್ಯಾನ ಮಾಡಿ ಮುಂದುವರಿದೆವು. ಜ್ಯೋತಿ ಮಠದಿಂದ 43 ಕಿ.ಮೀ. ದಾರಿ ಬಹಳ ದುರ್ಗಮವಿದೆ. ಮಧ್ಯದಲ್ಲೊಂದು ಜಲವಿದ್ಯುತ್ ಸ್ಥಾವರವೂ ಇದೆ. ಮುಂದೆ ಒಂದು 5 ಕಿ.ಮೀ. ಗಳ ದೂರ ಸದಾ ಭೂಕುಸಿತಗಳಾಗುವ ರಸ್ತೆಯಿದೆ. ಅಲ್ಲೆಲ್ಲಾ 'Rock Fall Zone' ಎಂಬ ಫಲಕಗಳಿವೆ. ನಾವು ಹೋದ ಆ ಮುಸ್ಸಂಜೆ ಹೊತ್ತಿಗೆ ಹನಿಮಳೆ ಜಿನುಗುತ್ತಿತ್ತು. ಸುಮಾರು 7 ಗಂಟೆಗೆ ಬದರೀನಾಥ ತಲಪಿ ಭೋಲೇಗಿರಿ ಆಶ್ರಮದ ಕೊಠಡಿಗಳಲ್ಲಿ ತಂಗಿದೆವು. ಚಳಿಯೂ ಬಹಳವಾಗಿತ್ತು. ರಾತ್ರೆಯ ಮಂದ ಬೆಳಕಿನಲ್ಲಿ ಜಿನುಗು ಮಳೆಗೆ ದೇವರ ಧೂಲೀ ದರ್ಶನ ಮಾಡುವ ಆಸೆ ಕೊನರಿತು. ಕೊನೆಗೆ ಊಟ ಮಾಡಿ ವಿಶ್ರಾಂತಿ ಪಡೆದೆವು.

ದಿನಾಂಕ 15-10-2015 ರ ಬೆಳಗಿನ ಜಾವ ಕೊಠಡಿಗಳಿಂದ ಹೊರಬಂದು ನೋಡಿದರೆ ಎದುರಿನ ಹಿಮಾಚ್ಛಾದಿತ ಶಿಖರ ನೀಲವರ್ಣ ತಾಳಿತ್ತು. ಕೆಲಕಾಳದೊಳಗೆ ಬಿಳಿದಾದ ಶಿಖರ ಸೂರ್ಯೋದಯವಾಗುತ್ತಲೇ ಚಿನ್ನದ ರಂಗೇರಿತು, ಪದರ ವಿಸ್ತರಿಸುತ್ತಾ, ವಿಸ್ತರಿಸುತ್ತಾ ಬೆಳ್ಳಿಬೆಟ್ಟವಾಯಿತು. ಆಶ್ರಮದ ಸುತ್ತಲೂ ಹಿಮಾಚ್ಛಾದಿತ ಶಿಖರಗಳು ಚಾಚಿಕೊಂಡಿವೆ. ಹಿಂದಿನ ದಿನವೇ ಅಲ್ಲಿನ ಪಂಡಿತ್ ಜೀ (ಪುರೋಹಿತರು) ಯವರಲ್ಲಿ ತೀರ್ಮಾನಿಸಿದ್ದಂತೆ ಬೆಳಗಿನ 06:30 ಕ್ಕೇ ಬಂದಿದ್ದ ಅವರ ಜೊತೆ ನಡೆದು ಅಂಗಡಿ ಮುಂಗಟ್ಟುಗಳ ಸಾಲು ದಾಟಿ ಅಲಕಾನಂದ ನದೀ ತೀರಕ್ಕೆ ಬಂದೆವು. ನಾವು ಬಂದುದು ನರಪರ್ವತದಿಂದ ಪಶ್ಚಿಮಾಭಿಮುಖವಾಗಿ ಇಳಿಯುತ್ತ ನದಿಯೆಡೆಗೆ. ನದಿಯಲ್ಲಿ ಬಹುದೊಡ್ಡ ಬಂಡೆಯೊಂದಿದೆ. ಅದರ ಆಕಾರದಿಂದ ಅದು "ವರಾಹ ಶಿಲೆ" ಎಂಬ ಹೆಸರು ಪಡೆದಿತ್ತು. ಅದರ ಮಗುಳಲ್ಲಿ ಸೇತುವೆ ದಾಟಿ ನಾರಾಯಣ ಪರ್ವತ ಭಾಗಕ್ಕೆ ಬಂದೆವು. ಅಲ್ಲಿ ಯಾತ್ರಿಗಳೆಲ್ಲ ಬಟ್ಟೆ ಕಳಚಿ ಬಿಸಿನೀರಿನ ಕೆರೆ 'ತಪ್ತಕುಂಡ' ದಲ್ಲಿ ಸ್ನಾನ ಮಾಡಿದೆವು. ಆ ಕೊರೆಯುವ ಚಳಿಗೆ ಆ ಸ್ನಾನ ಆಪ್ಯಾಯಮಾನವಾಗಿತ್ತು. ಪುಣ್ಯಪ್ರದವಾಗಿತ್ತು. ನನ್ನ ಸ್ನೇಹಿತ ಉಮೇಶ್ ನಾಯಕ್ ರು ಪೂರ್ವನಿರ್ಧಾರದಂತೆ ಕೇಶ ಮುಂಡನ ಮಾಡಿಸಿದರು. ನಾವೆಲ್ಲರೂ ಸ್ನಾನದ ನಂತರ ವಸ್ತ್ರಧಾರಿಗಳಾಗಿ ಪುರೋಹಿತರು ಬಟ್ಟೆ ಹಾಸಿದ್ದಲ್ಲಿ ಕುಳಿತುಕೊಂಡೆವು. ಅಲ್ಲೇ ಹಿಂಬದಿಯಲ್ಲಿ ನದಿ ರಭಸವಾಗಿ ಹರಿಯುತ್ತಿತ್ತು. ವೇದ, ಮಂತ್ರ ಸಹಿತ ಸಂಕಲ್ಪ ಮಾಡಿ, ದಂಪತಿ ಪೂಜೆ ಮಾಡಿಸಿದೆವು. ನಾನು ಮತ್ತು ಉಮೇಶ್ ನಾಯಕ್ ರು ಒಬ್ಬಂಟಿಗಳಾಗಿದ್ದರೂ ವಿವಾಹಿತರಿದ್ದುದರಿಂದ ದಂಪತಿ ಪೂಜೆಗೆ ಅರ್ಹರಾಗಿದ್ದೆವು. ದಂಪತಿ ಪೂಜೆ ಮುಗಿಸಿ ದಕ್ಷಿಣೆತೆತ್ತು ಪ್ರಸಾದ ಸ್ವೀಕರಿಸಿದೆವು. ನಂತರ ಕ್ಷೇತ್ರವಿಧಿಯಂತೆ 'ಬ್ರಹ್ಮಕಪಾಲ'ಕ್ಕೆ ಅಲ್ಲೇ ನದಿ ದಡದಲ್ಲಿ ಸ್ವಲ್ಪ ಮುಂದಕ್ಕೆ ನಡೆದು, ನದಿಯಿಂದ ಅವರು ನೀಡಿದ ತಂಬಿಗೆಗಳಲ್ಲಿ ನೀರು ತಂದು ಕುಳಿತುಕೊಂಡೆವು. ಪುರೋಹಿತರು ನೀಡಿದ ಅನ್ನದ ತಟ್ಟೆಯಲ್ಲಿ 21 ಕ್ಕೆ ಕಡಿಮೆಯಾಗದಷ್ಟು ಪಿಂಡ ತಯಾರಿಸಿದೆವು. ಪುರೋಹಿತರು ಶ್ರಾದ್ಧ ಸಂಕಲ್ಪ ಮಾಡಿಸಿದರು. ಅವರವರ ಪಿತೃಗಳನ್ನೂ ಆಹ್ವಾನಿಸಿ ತಂದೆ, ತಾಯಿ, ದೊಡ್ಡಪ್ಪ, ಚಿಕ್ಕಪ್ಪ, ಅವರ ಪತ್ನಿಯರು, ಅಣ್ಣ, ತಮ್ಮಂದಿರು, ಅಕ್ಕ, ತಂಗಿ, ಭಾವಂದಿರು, ಪತ್ನಿಯ (ತಂದೆ, ತಾಯಿ ಇದ್ದರೆ) ಅಜ್ಜ, ಅಜ್ಜಿ ಸೋದರ ಮಾವ, ತನ್ನ ತಾಯಿಯ ತಂದೆ, ತಾಯಿ, ಮಾವ ಹೀಗೆ ಹಿರಿಯರನೇಕರನ್ನು ಸ್ಮರಿಸಿ ಪಿಂಡ ಪ್ರದಾನ ಮಾಡಿಸಿ, ತಿಲತರ್ಪಣಗಳನ್ನು ನೀಡಿದೆವು. ನಂತರ ಅಲ್ಲೇ ಇರುವ ಬ್ರಹ್ಮಕಪಾಲದ ಕೃಷ್ಣಶಿಲೆಗಳ ಸಾಲಿನ ಮೇಲೆ ಪಿಂಡದ ತಟ್ಟೆಗಳನ್ನಿಟ್ಟು, ನಂತರ ಅಲ್ಲಿಂದ ನದಿಗಿಳಿದು ಪಿಂಡವಿಸರ್ಜನೆ ಮಾಡಿದೆವು. ಆಮೇಲೆ ಕೈ, ಕಾಲು, ಮುಖ ತೊಳೆದು ಪ್ರೋಕ್ಷಣೆ ಮಾಡಿದೆವು. ಆ ಬಳಿಕ ಮೆಟ್ಟಿಲೇರಿ ದೇವಸ್ಥಾನ ಪ್ರವೇಶಿಸಿದೆವು. ಶ್ರೀ ಬದರೀನಾರಾಯಣ, ಭೂದೇವಿ, ಶ್ರೀದೇವಿ ಸಹಿತ, ಗರುಡ, ನಾರದ, ಕುಬೇರ, ಊರ್ವಶಿಯವರ ವಿಗ್ರಹಗಳಿವೆ. ದೇವಳದ ಹೊರ ಪ್ರಾಂಗಣದಲ್ಲಿ ಲಕ್ಷ್ಮೀ ದೇಗುಲವಿದೆ. ಬದರೀ ಎಂದರೆ ಲಕ್ಷ್ಮೀ ಎಂದರ್ಥವಂತೆ. ಹೊರಗೆ ಶಂಕರಾಚಾರ್ಯರ ವಿಗ್ರಹವಿದೆ. ಹನುಮಂತ, ಗಣಪತಿ ವಿಗ್ರಹಗಳಿವೆ. ದೇವರ ಪಾಕಶಾಲೆ ಇದೆ. ಶ್ರೀ ಬದರೀನಾರಾಯಣನ ಪ್ರಸಾದ ಸ್ವೀಕರಿಸಿದೆವು. ಅಲ್ಲಿ ಬ್ರಹ್ಮಚಾರಿಗಳಾದ ಕೇರಳದ ನಂಬೂದರಿ ಅರ್ಚಕರನ್ನು ರಾವಲ್ ಜೀ ಎಂದು ಕರೆಯುತ್ತಾರೆ. ಹಿಂದಿರುಗಿ ಆಶ್ರಮಕ್ಕೆ ಬಂದಾಗ ಮಧ್ಯಾಹ್ನವಾಗಿತ್ತು. ಊಟ ಮಾಡಿದೆವು. ಬಸ್ಸಿನಲ್ಲಿ ಕುಳಿತು 4 ಕಿ.ಮೀ. ದೂರದಲ್ಲಿರುವ 'ಮನಾ', मण ಎಂಬ ಭಾರತದ ಆ ಭಾಗದ ಕಟ್ಟಕಡೆಯ ಗ್ರಾಮಕ್ಕೆ ತಲುಪಿದೆವು. ಪುರಾಣ ಪ್ರಸಿದ್ಧವಾದ ಸ್ಥಳವದು. ಅಲ್ಲಿನ ಜನರು 6 ತಿಂಗಳ ಕಾಲ ಅಲ್ಲಿದ್ದು ನೆಲಗಡಲೆ, ರಾಮಧನ್ ಬೆಳೆ ಬೆಳೆದು, ಉಣ್ಣೆಯ ನೇಯ್ಗೆ ಕೆಲಸಗಳಲ್ಲಿ ತೊಡಗಿದ್ದು ಚಳಿಗಾಲದಲ್ಲಿ ಜ್ಯೋತಿ ಮಥದತ್ತ ವಲಸೆ ಹೋಗುವುದಾಗಿ ತಿಳಿದುಬಂತು. 'ಮನಾ' ಗ್ರಾಮದಲ್ಲಿ ಸ್ವಲ್ಪ ದೂರ ನಡೆದು ಬೆಟ್ಟವೇರಿದರೆ ಮೊದಲಿಗೆ ಗಣಪತಿ ಗುಫಾ (ಗುಹೆ) ನಂತರ ವ್ಯಾಸ ಗುಫಾ (ಗುಹೆ) ಸಿಗುತ್ತದೆ. ವ್ಯಾಸ ಗುಫಾದ ರಚನೆ ಬಹಳ ಆಕರ್ಷಕವಾಗಿದೆ, ಕಟ್ಟಿದ ಕಟ್ಟಡದಂತೆ ಕಾಣಿಸುವ ಅಮೂಲ್ಯ ಬಂಡೆಯದು. ಪುರಾಣದಂತೆ ಅಲ್ಲೇ ಮಹಾಭಾರತ ಕಾವ್ಯ ರಚನೆಯಾಯಿತಂತೆ. ಆ ಬೆಟ್ಟದ ಮಗ್ಗುಲಿಗೆ ಇಳಿದರೆ ಪರ್ವತದ ಬಂಡೆಗಳ ಎಡೆಯಿಂದ 'ಸರಸ್ವತಿ' ಎಂಬ ನದಿ ಒಂದೊಮ್ಮೆ ರಭಸವಾಗಿ ಹರಿದು ತಿಳಿನೀಲಿ ನೇರ ಸೆಲೆ ಕಾಣಿಸಿಕೊಳ್ಳುತ್ತದೆ. ಅಲ್ಲೇ ಸರಸ್ವತೀ ಮಂದಿರವೂ ಇದೆ. ಸರಸ್ವತೀ ನದಿ ದಾಟಲು ಭೀಮನಿಂದ ನಿರ್ಮಾಣಗೊಂಡ ದೊಡ್ಡ ಕಲ್ಲಿನ ಸಂಕವಿದೆ. ಇದನ್ನು ಭೀಮ್ ಪಾಲ್  ಅಥವಾ ಫೂಲ್ ಎನ್ನುವರು. ಆ ಸರಸ್ವತಿ ನದಿ ಕೆಲವೇ ಮೀಟರ್ ದೂರ ಹರಿದು ಇನ್ನೊಂದು ಮಗ್ಗುಲ ಬೆಟ್ಟದಿಂದ ಹರಿದು ಬರುವ ಅಲಕಾನಂದ ನದಿಯನ್ನು ಸೇರುತ್ತದೆ. ಅದೇ ಕೇಶವಪ್ರಯಾಗ ಅಥವಾ ಸಂಗಮಸ್ಥಳ. ಸರಸ್ವತೀ ನದೀ ನೀರು ಸ್ಫಟಿಕ ನೀಲವಾಗಿ ಗೋಚರಿಸುತ್ತದೆ. ಅಲಕಾನಂದ ನದಿ ದಡದಲ್ಲೇ ಮುಂದುವರಿದರೆ ಪಾಂಡವರು ಸ್ವರ್ಗಾರೋಹಣ ಮಾಡಿದ 'ಸಾತೋಪಂತ್'  ಎಂಬಲ್ಲಿಗೆ ಸಾಗುತ್ತದೆ. ಅಲ್ಲೆಲ್ಲಾ ಬಹಳ ಸುಂದರವಾದ ದೃಶ್ಯಗಳಿವೆಯಂತೆ. ಸಾತೋಪಂತದ DVDಗಳಲ್ಲಿ ಅಂತಹ ದೃಶ್ಯಗಳು ಲಭ್ಯ. ನಾವು ಹಿಂದಿರುಗಿ ಬಸ್ಸಿನಲ್ಲಿ ಬದರೀನಾಥಕ್ಕೆ ಬಂದೆವು. ಸಂಜೆ 05:30ಕ್ಕೆ ದೇವಸ್ಥಾನ ಸೇರಿದೆವು. ಬೆಳಿಗ್ಗೆ ಕಾರ್ಯಾಲಯದಲ್ಲಿ ಮಾಡಿಸಿದ್ದ ರಶೀದಿ ತೋರಿಸಿ 6 ಘಂಟೆಗೆ ಒಳನಡೆದು, ಕುಳಿತು, ಕರ್ಪೂರಾರತಿ ನೋಡಿದೆವು. ಅಲ್ಲಿ ರಾವಲ್ ಜೀ ಯವರಿಂದ ಪ್ರಸಾದ ಪಡೆದೆವು. ಅವರು ಪ್ರಸಾದ ನೀಡುವಾಗ ನಾವೊಂದು ನಾಣ್ಯ ಕೊಟ್ಟರೆ ಅವರದನ್ನು ಕುಬೇರನ ವಿಗ್ರಹ ಸ್ವರ್ಶಿಸಿ ಹಿಂದಿರುಗಿಸುತ್ತಾರೆ. ಅದರಿಂದ ಧನ ವೃದ್ದಿಯಾರುತ್ತದೆ ಎನ್ನುವರು. ನಂತರ ಶಂಕಾರಾಚಾರ್ಯರ ವಿಗ್ರಹದ ಮುಂದೆ ಕುಳಿತು ಭಜನೆಯಲ್ಲಿ ಪಾಲ್ಗೊಂಡೆವು. ರಾತ್ರೆ ಆಶ್ರಮಕ್ಕೆ ಹಿಂದಿರುಗಿ ವಿರಮಿಸಿದೆವು.

ಮರುದಿನ ದಿನಾಂಕ 16-10-2015 ರ ಪ್ರಾತಃಕಾಲ ನಾವು ಆಶ್ರಮದ ಮುಂದಿನ ಬೆಟ್ಟಗಳ ಮೇಲಿನ ಬೆಳಕಿನಾಟ, ಸೂರ್ಯೋದಯದ ಹೊಂಬೆಳಕಿನ ಸೊಬಗನ್ನು ಕಣ್ತುಂಬ ನೋಡಿ ಒಂದಷ್ಟನ್ನು ಕೆಮರಾದಲ್ಲಿ ಸೆರೆಹಿಡಿದೆವು. ನಮ್ಮ ತಂಡದಲ್ಲಿ ಕೆಲವರು ಬೆಳಿಗ್ಗೆ ಪುನಃ ದೇವಸ್ಥಾನಕ್ಕೆ ಹೋಗಿ ತಪ್ತಕುಂಡದಲ್ಲಿ ಮಿಂದು, ದೇವರ ದರ್ಶನ ಮಾಡಿ ಬಂದರು. ಬೆಳಿಗ್ಗೆ ಬಸ್ಸಿನಲ್ಲಿ ಕುಳಿತು ಸುತ್ತಲಿನ ದೃಶ್ಯಗಳನ್ನು ನೋಡಿ ಸಂತೋಷಿಸುತ್ತಾ ಜ್ಯೋತಿಮಠದ ದಾರಿಯಲ್ಲಿ ಹನುಮಾನ್ ಚಟ್ಟಿ ಎಂಬಲ್ಲಿ ಹನುಮಂತನ ಗುಡಿ ಹೊಕ್ಕು ದರ್ಶನ ಮಾಡಿದೆವು. ಭೀಮನಿಗೆ ಸುಗಂಧಿಕಾ ಪುಷ್ಪ ತರಲು ಬಂದಾಗ ಅಡ್ಡ ಕುಳಿತ ಮುದಿ ವಾನರನ ಬಾಲ ಸರಿಸಲಾಗದೆ ಗರ್ವಭಂಗವಾದ ಸ್ಥಳವೆಂದು ಪುರಾಣ ಕಥೆ, ಅದೇ ಹನುಮಂತನ ಗುಡಿ ಇಲ್ಲಿದೆ. ಹಿಂದಿರುಗುತ್ತಾ ಜ್ಯೋತಿಮಠ, ವಿಷ್ಣುಪ್ರಯಾಗ, ನಂದಪ್ರಯಾಗ ಮಾರ್ಗವಾಗಿ ಬಂದೆವು. ಅಲ್ಲೊಂದು ಗರುಡದೇವನ ಗುಡಿ ಪ್ರಸಿದ್ಧವಿದೆ. ಗರುಡ 10 ಸಾವಿರ ವರ್ಷ ತಪಸ್ಸು ಮಾಡಿ ವಿಷ್ಣುವಿನ ವಾಹನವಾದನಂತೆ. ಅಲ್ಲಿ 'ಗರುಡಗಂಗಾ' ಎಂಬ ಹೊಳೆ ಹರಿಯುತ್ತದೆ. ಅದರಲ್ಲಿ ಮಿಂದು (ಪ್ರೋಕ್ಷಿಸಿ), ಒಂದು ಕಲ್ಲು ಹೆಕ್ಕಿ ತಂದು ಅರ್ಚಕರಿಗಿತ್ತಾರೆ ಅವರು ಗಂಧ ಲೇಪಿಸಿ ಪೂಜೆ ಮಾಡಿ ಆಶೀರ್ವದಿಸುತ್ತಾರೆ. ನಾವದನ್ನು (ಕಲ್ಲನ್ನು) ತಂದು ಸಂಪುಟ (ದೇವರ ಮಣೆ) ದಲ್ಲಿಟ್ಟರೆ ನಾಗಭಾದೆ ತೊಲಗುತ್ತದೆಂಬ  ನಂಬಿಕೆ ಇದೆ. ನಂತರ ಕರ್ಣಪ್ರಯಾಗ, ರುದ್ರಪ್ರಯಾಗಕ್ಕಾಗಿ 'ಶ್ರೀಕೊಟ್ ಕ್ಯಾಸೆಲ್' ಗೆ ಹಿಂದಿರುಗಿ ಬಂದು ವಿರಮಿಸಿದೆವು.

ಮರುದಿನ ತಾ 17-10-2015 ರಂದು ಶ್ರೀ ಕೊಟ್ ನಿಂದ ಬೆಳಿಗ್ಗೆ ಹೊರಟು ಅಲಕಾನಂದ ನದಿ ದಾಟಿ ಬಲಬದಿಯಲ್ಲೇ ಪ್ರಯಾಣ ಮಾಡಿ ದೇವಪ್ರಯಾಗ ತಲುಪಿದೆವು. ಇಲ್ಲಿ ಭಾಗೀರಥೀ ಹಾಗೂ ಅಲಕಾನಂದ ನದಿಗಳು ಸಂಗಮವಾಗಿ ಮುಂದೆ 'ಗಂಗಾನದಿ' ಯಾಗಿ ಹರಿದು ಹೃಷಿಕೇಶ ತಲುಪುತ್ತದೆ. ಅಲ್ಲಿ ನದಿಯಲ್ಲಿ ಹಲವು ಉತ್ಸಾಹಿಗಳು ರಾಪ್ಟಿಂಗ್ (ರಬ್ಬರ್ (ದೋಣಿ) ತೆಪ್ಪ) ನಡೆಸುತ್ತಾರೆ. ಹೃಷಿಕೇಶದಿಂದ ನದೀ ದಡವನ್ನು ತೊರೆದು ಹರಿದ್ವಾರಕ್ಕೆ ಮಧ್ಯಾಹ್ನದ ವೇಳೆಗೆ ತಲುಪಿದೆವು. ಹೊಟೆಲ್ 'ಪೆರಿವಾಲ್' ನಲ್ಲಿ ವಾಸ್ತವ್ಯ ಹೂಡಿ ಸಂಜೆ ಹರಿದ್ವಾರದಲ್ಲಿ ಗಂಗೆಯ ಇನ್ನೊಂದು ಮಗ್ಗುಲಲ್ಲಿ ಬೆಟ್ಟದ ಮೇಲಿರುವ ಚಂಡಿ ದೇವಿ ಮಂದಿರಕ್ಕೆ (ವಿರುದ್ಧ ದಿಕ್ಕಿನಲ್ಲಿ ಮನಸಾದೇವಿ ಮಂದಿರವಿದೆ) Rope way ಮೂಲಕ ಏರಿದೆವು. ಆದರೆ ಸುತ್ತಲಿನ ದೃಶ್ಯ ಮಂಜು ಮುಸುಕಿದಂತೆ ಇದ್ದುದರಿಂದ ಹೆಚ್ಚೇನೂ ಕಾಣಿಸಲಿಲ್ಲ. ಅಲ್ಲಿ ಅಂಜಲೀ ದೇವಿಯಾ ಗುಡಿಯೂ ಇದೆ. ಅಲ್ಲಿಂದ ಹಿಂದಿರುಗಿ ಗಂಗಾನದಿಯಿಂದ 'ಗಂಗಾಜಲ' ಸಂಗ್ರಹಿಸಿಕೊಂಡೆವು. ರಾತ್ರೆ ನಮ್ಮಷ್ಟಕ್ಕೆ ಹೋಟೆಲಿನ ಪಕ್ಕದಲ್ಲಿರುವ 'ಗಾಯತ್ರೀ ಕುಂಜ' ಎಂಬ ಆಶ್ರಮದೊಳಗೆ ಸುತ್ತಾಡಿದೆವು. ದೊಡ್ಡ ಆಶ್ರಮವಾಗಿದೆ. ರಾತ್ರೆ ಹರಿದ್ವಾರದಲ್ಲಿ ಕಳೆದೆವು.

ಮರುದಿನ ಬೆಳಿಗ್ಗೆ ದಿನಾಂಕ 18-10-2015 ರಂದು 05:30 ಕ್ಕೆ ಹರಿದ್ವಾರದಿಂದ ದೆಹಲಿಗೆ ಪ್ರಯಾಣ ಮಾಡಿ ಮಧ್ಯಾಹ್ನ 12:30 ಕ್ಕೆ ಕರೋಲ್ ಭಾಗ್ ನ Sunstar ರೆಸಿಡೆನ್ಸಿ ತಲುಪಿದೆವು. ಸಂಜೆ ಆಸಕ್ತರೊಂದಿಗೆ ಸೇರಿದ ನಾನು ಕಾರಿನಲ್ಲಿ ರಾಷ್ಟಪತಿ ಭವನ, ಪಾರ್ಲಿಮೆಂಟ್, ಜನಪತ್ ರಸ್ತೆ, ಕೃಷಿ ಭವನ, ವಿಜ್ಞಾನ ಭವನಗಳನ್ನು ಕುಳಿತೇ ನೋಡಿದೆವು. ಇಂದಿರಾ ಗಾಂಧಿಯವರ ಮನೆ, ಕುತುಬ್ ಮಿನಾರ್, ರಾಜಘಾಟ್, ಲಾಲ್ ಕ್ವಿಲಾ ಅಥವಾ ಕೆಂಪುಕೋಟೆ, ಇಂಡಿಯಾ ಗೇಟ್, ಸುಪ್ರೀಂ ಕೋರ್ಟ್ ನೋಡಿ ರಾತ್ರೆ ಹೋಟೆಲಿಗೆ ಹಿಂದಿರುಗಿದೆವು.

ದಿನಾಂಕ 19-10-2015 ರ ಬೆಳಿಗ್ಗೆ 10:30 ರ ನಂತರ ಕರೋಲ್ ಭಾಗ್ ಮಾರ್ಕೆಟ್ ಗೆ (ಅಜ್ಮಲ್ ಖಾನ್ ರೋಡ್) ನಡೆದು ಹೋದೆ. ಸೋಮವಾರ ಬೀದಿ ವ್ಯಾಪಾರ ಮಾತ್ರವಿದೆ. ದೆಹಲಿಯಲ್ಲಿ ಸೋಮವಾರ ರಜೆ - ಅಂಗಡಿ, ಮುಂಗಟ್ಟು ಹಾಗೂ ಮ್ಯೂಸಿಯಂಗಳಿಗೆ. 5 ಸೀರೆ, ಮಕ್ಕಳಿಗೆ ಎರಡೆರಡು ಪ್ರತಿ ಬಟ್ಟೆ ಖರೀದಿಸಿದೆ. 'ಬಿಕಾನೇರ್ ವಾಲಾ' ಎಂಬ ಸ್ವೀಟ್ ಸ್ಟಾಲಿನಿಂದ ಆಗ್ರಾ ಪೇಟಾ ಖರೀದಿಸಿ ತಂದೆ. ಸಂಜೆ ಕರೋಲ್ ಭಾಗ್ ನಿಂದ ದ್ವಾರಕಾ ವರೇಗೆ Metro ದಲ್ಲಿ ಪ್ರಯಾಣ ಹೋಗಿ ಬಂದೆನು. ದಿನಾಂಕ 20-10-2015 ರ ಬೆಳಿಗ್ಗೆ 09:20 ಕ್ಕೆ ಮಂಗಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಹೊರಟು 22 ರ ಮುಂಜಾನೆ 04:15 ಕ್ಕೆ ಮಂಗಳೂರು ತಲುಪಿ ಪುತ್ತೂರಿಗೆ ರೈಲಿನಲ್ಲಿ - ಅಲ್ಲಿಂದ ಬಸ್ಸಿನಲ್ಲಿ ಮನೆಗೆ ತಲುಪಿದೆ.